ಮೈಸೂರು

ಕುವೆಂಪುರವರ ಕನ್ನಡಾಭಿಮಾನವನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು : ಪ್ರೊ. ಕೆ. ಸತ್ಯನಾರಾಯಣ

ಮೈಸೂರು,ಡಿ.29:- ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಇಂದು ಕುವೆಂಪು ಅವರ 115ನೇ ಜನ್ಮ ದಿನಾಚರಣೆ ಅಂಗವಾಗಿ ಕುವೆಂಪು ಸಾಹಿತ್ಯ ಅವಲೋಕನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ , ಶೈಕ್ಷಣಿಕ ಸಂಯೋಜಕ ಪ್ರೊ. ಕೆ. ಸತ್ಯನಾರಾಯಣ ಮಾತನಾಡಿ “ಕನ್ನಡ ಸಾಹಿತ್ಯದ ಅನರ್ಘ್ಯ ರತ್ನರಾದ ಕುವೆಂಪು ಅವರ ಪ್ರಾರಂಭಿಕ ಅಕ್ಷರಾಭ್ಯಾಸವು ಮನೆಯಲ್ಲೇ ನಡೆದಿರುವುದು ವಿಶೇಷವಾಗಿದೆ. ಕುವೆಂಪು  ಸಾಹಿತ್ಯವು ಸರಳ ಹಾಗೂ ಅರ್ಥ ಮಾಧುರ್ಯತೆಯಿಂದ ಕೂಡಿದೆ. ಇವರು ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ತಮ್ಮ ಬಾಲ್ಯಾವಸ್ಥೆಯಲ್ಲಿ ಆಂಗ್ಲ ಭಾಷೆಯಲ್ಲಿಯೂ ಕವನಗಳನ್ನು ರಚಿಸುತ್ತಿದ್ದ ಮಹಾಕವಿ”. ಕುವೆಂಪುರವರ ಕನ್ನಡಾಭಿಮಾನವನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಇವರ ಸಾಹಿತ್ಯದ ಒಳಹೊಕ್ಕಾಗ ಎಲ್ಲಾ ಪ್ರಕಾರಗಳಲ್ಲಿಯೂ ಮಹಿಳೆಯರಿಗೆ ಮೊದಲನೆಯ ಪ್ರಾಶಸ್ತ್ಯವನ್ನು ಕೊಟ್ಟಿರುವುದು ಗಮನಾರ್ಹವಾಗಿದೆ. ಮಹಿಳೆಯರಿಗೆ ಮೊದಲ ಗೌರವ ನೀಡುವುದು ಕುವೆಂಪುರವರ ಹಿರಿಮೆ. ಇವರ ಎಲ್ಲಾ ನಾಟಕಗಳಲ್ಲಿಯೂ ಜಾತಿ ತಾರತಮ್ಯವನ್ನು ವಿರೋಧಿಸಿ ಮಾನವ ಕುಲ ಒಂದೇ ಎಂದು ಪ್ರತಿಪಾದಿಸಿದ ಮಹಾನ್ ಚೇತನವೇ ಕುವೆಂಪು  ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಪ ಪ್ರಾಂಶುಪಾಲರು ಜಿ. ಪ್ರಸಾದಮೂರ್ತಿ  ಮಾತನಾಡಿ  “ವೈಚಾರಿಕ ಪ್ರಜ್ಞೆಯಲ್ಲಿ ದೇವರನ್ನು ಆರಾಧಿಸಿದ ಏಕೈಕ ಕವಿ ಎಂದರೆ ಕುವೆಂಪು. ಪರಂಪರೆಯನ್ನು ವಿರೋಧಿಸದೆ ಅದರ ಆಚರಣೆಯಲ್ಲಿರುವ ಮೂಢನಂಬಿಕೆಗಳನ್ನು ವಿರೋಧಿಸಿ ವಿಶ್ವಮಾನವ ಸಂದೇಶವನ್ನು, ಮಂತ್ರ ಮಾಂಗಲ್ಯದ ವಿಶೇಷತೆಯನ್ನು ಹಾಗೂ ಸಪ್ತ ಸೂತ್ರಗಳನ್ನು ಜಗತ್ತಿಗೆ ತಿಳಿಸಿಕೊಟ್ಟ ಪ್ರಕೃತಿ ಕವಿ, ಯುಗದ ಕವಿ, ಜಗದ ಕವಿ,” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಐಚ್ಛಿಕ ಕನ್ನಡ ವಿದ್ಯಾರ್ಥಿನಿಯರಾದ  ಸೋನಿಯ , ಅಂಬಿಕಾ, ಶಶಿರೇಖಾ,ಸಂಗೀತಾ, ನಮ್ರತಾ, ಕಾವ್ಯ ಕುವೆಂಪು ಸಾಹಿತ್ಯದ ಅವಲೋಕನ ಮಾಡಿದರು.   ವೇದಿಕೆಯಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸಂಧ್ಯಾರಾಣಿ ಎಂ.ಎಸ್. ಹಾಗೂ ಹೆಚ್.ಬಿ. ಬಸಪ್ಪ ಉಪಸ್ಥಿತರಿದ್ದರು.

ಶಯನ ಕುವೆಂಪು ಗೀತೆಯನ್ನು ಹಾಡಿದರೆ, ಅಪೂರ್ವ ಮತ್ತು ತಂಡದವರು ರೈತ ಗೀತೆಯನ್ನು ಪ್ರಸ್ತುತ ಪಡಿಸಿದರು. ವೀಣಾ ನಿರೂಪಿಸಿ, ಕಾವ್ಯ ವಂದಿಸಿದರು. (ಎಸ್.ಎಚ್)

Leave a Reply

comments

Related Articles

error: