ಪ್ರಮುಖ ಸುದ್ದಿ

ಸಾಹಿತ್ಯದ ಮೂಲಕವೇ ವಿಶ್ವದ ಗಮನ ಸೆಳೆದ ಕುವೆಂಪು : ಕಾಜೂರು ಸತೀಶ್ ಮೆಚ್ಚುಗೆ

ರಾಜ್ಯ(ಮಡಿಕೇರಿ) ಡಿ.29 :- ಯುಗದ ಜಗದ ಕವಿಯಾಗಿರುವ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ತಮ್ಮ ಸಾಹಿತ್ಯದ ಮೂಲಕ ಸ್ಥಳೀಯ ಮಾತ್ರವಲ್ಲ ವಿಶ್ವವ್ಯಾಪಿಯಾದ ಜ್ಞಾನವನ್ನು ಹೊರಹೊಮ್ಮಿಸಿದ್ದಾರೆಂದು ಯುವ ಸಾಹಿತಿಗಳಾದ ಕಾಜೂರು ಸತೀಶ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಸಂಯುಕ್ತಾಶ್ರಯದಲ್ಲಿ ನಗರದ ಕೊಡಗು ಪತ್ರಿಕಾ ಭವನ ಸಭಾಂಗಣದಲ್ಲಿ ಆಯೋಜಿತ ರಾಷ್ಟ್ರಕವಿ ಕುವೆಂಪುರವರ 114ನೇ ಜನ್ಮದಿನಾಚರಣೆ ಮತ್ತು ‘ವಿಶ್ವ ಮಾನವ ಸಂದೇಶ’ ಕುರಿತ ಕವಿಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು.

ಕುವೆಂಪುರವರು ನವ್ಯ ಕಾವ್ಯ ಪರಂಪರೆಯ ಕಾಲಘಟ್ಟದಲ್ಲಿ, ಮಹಾ ಕಾವ್ಯ ರಚನೆ ಅಸಾಧ್ಯವೆನ್ನುವ ಪರಿಸ್ಥಿತಿಗಳ ನಡುವೆ  ‘ರಾಮಾಯಣ ದರ್ಶನಂ’ ಮಹಾಕಾವ್ಯ ಪರಂಪರೆಯನ್ನು ಮರಳಿ ಸೃಷ್ಟಿಸಿದವರಾಗಿದ್ದಾರೆ. ಈ ಮಹಾ ಕಾವ್ಯದಲ್ಲಿ ಜಾಗತಿಕವಾದ ಎಲ್ಲ ಜ್ಞಾನವನ್ನು ಅಡಕಗೊಳಿಸುವ ಮಹತ್ ಕಾರ್ಯವನ್ನೂ ಅವರು ಸಾಧಿಸಿರುವುದು ಅತ್ಯಂತ ಮಹತ್ವದ್ದೆಂದು ಅಭಿಪ್ರಾಯಿಸಿದರು.

ಕುವೆಂಪು ಅವರು ವಿವಿಧ ಪ್ರಕಾರಗಳಲ್ಲಿ ಸೃಷ್ಟಿಸಿರುವ ಸಾಹಿತ್ಯವನ್ನು ನವ್ಯದ ಚೌಕಟ್ಟಿನಲ್ಲಷ್ಟೆ ಇಟ್ಟು ನೋಡುವ ಪ್ರಯತ್ನಗಳು ನಡೆದಿದೆ. ಆದರೆ, ಇವರ ಸಾಹಿತ್ಯ ನವ್ಯ, ಬಂಡಾಯ , ದಲಿತ ಸಾಹಿತ್ಯದ ಎಲ್ಲಾ ಆಯಾಮ ಮತ್ತು ಗುಣಗಳನ್ನು ಹೊಂದಿರುವುದು ವಿಶೇಷ. ಕುವೆಂಪು ಅವರು ರೂಢಿಗತವಾದ ಪರಂಪರೆಯನ್ನೆಂದು ತಿರಸ್ಕರಿಸಿದವರಲ್ಲ. ಬದಲಾಗಿ, ಅಂತಹ ಪರಂಪರೆಯನ್ನು ತಿದ್ದಿ ತೀಡಿದವರೆಂದು ಕಾನೂರು ಸತೀಶ್ ವಿಶ್ಲೇಷಿಸಿದರು.

ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧ ಮತ್ತು ತಾದಾತ್ಮ್ಯತೆಗಳನ್ನು ಕುವೆಂಪು ಸಾಹಿತ್ಯದುದ್ದಕ್ಕೂ ಗಮನಿಸಬಹುದಾಗಿದೆ. ಒಂದೆಡೆ ಅವರು ‘ಗಗನವನ್ನು ನೋಡುತ್ತಾ ನೋಡುತ್ತಾ ನೀಲಿಗಟ್ಟಬೇಕು’ ಎನ್ನುವ ಮಾತು ಪರಿಸರದೊಂದಿಗಿನ ಅವರ ಅವಿನಾಭಾವ ಸಂಬಂಧವನ್ನು ಬೊಟ್ಟು ಮಾಡುತ್ತದೆ. ಅವರ ‘ಮಲೆಗಳಲ್ಲಿ ಮದುಮಗಳು’ ಮತ್ತು ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಕಾದಂಬರಿಗಳೆರಡೂ ಮಲೆನಾಡ ಪರಿಸರದ ಹಿನ್ನೆಲೆಯಲ್ಲಿ ರೂಪುಗೊಂಡದ್ದಾದರು, ಎರಡೂ ಕಾದಂಬರಿಗಳು ವಿಭಿನ್ನ ವಿಷಯವನ್ನು ಹೊಂದಿರುವ ಕೃತಿಗಳೆಂದು ತಿಳಿಸಿದರು.

ತಮ್ಮ ಸಾಹಿತ್ಯದ ಮೂಲಕ ಕುವೆಂಪು ಅವರು ಮೌಢ್ಯತೆಯನ್ನು, ಶೋಷಣೆಯನ್ನು ವಿರೋಧಿಸಿದವರು ಮತ್ತು ವಿಶ್ವದ ಎಲ್ಲಾ ದಾರ್ಶನಿಕರನ್ನು ತಮ್ಮೊಳಗೆ ತೆಗೆದುಕೊಂಡು ಸಾಹಿತ್ಯ ಸೃಷ್ಟಿಸಿದವರೆಂದು ತಿಳಿಸಿದರು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿದ ಮಡಿಕೇರಿಯ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷರಾದ ಜಿ.ಟಿ. ರಾಘವೇಂದ್ರ ಮಾತನಾಡಿ, ಜ್ಞಾನಪೀಠ ಪ್ರಶಸ್ತಿಯನ್ನು ಗಳಿಸಿದ ಮೊದಲ ಕನ್ನಡಿಗ ಕುವೆಂಪುರವರು ತಮ್ಮ ಸಾಹಿತ್ಯದ ವೈಚಾರಿಕ ನಿಲುವುಗಳ ಮೂಲಕ ಮೌಢ್ಯದ ವಿರುದ್ಧ ಸಿಡಿದೆದ್ದವರು, ಅಂಧ ಶ್ರದ್ಧೆಯಿಂದ ಹೊರಬಂದು ವೈಜ್ಞಾನಿಕ ಚಿಂತನೆಯನ್ನು ಮೂಡಿಸಿಕೊಳ್ಳುವ ಸಂದೇಶ ಸಾರಿದವರೆಂದು ತಿಳಿಸಿದರು.

ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್. ಮನು ಶೆಣೈ ಮಾತನಾಡಿ, ಕುವೆಂಪುರವರು ವಿಶ್ವಮಾನವರಾಗುವಂತೆ ಜನರನ್ನು ಪ್ರೇರೇಪಿಸಿದ ಧೀಮಂತ ವ್ಯಕ್ತಿಯಾಗಿದ್ದಾರೆ. ಇವರು ತಮ್ಮ ಸಾಹಿತ್ಯದ ಮುಖೇನ ಕಂದಾಚಾರಗಳ ವಿರುದ್ಧ ಹೋರಾಡಲು ಪ್ರೇರೇಪಣೆಯನ್ನು ನೀಡಿದವರಾಗಿದ್ದಾರೆಂದು ತಿಳಿಸಿದರು.

ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫ್ರೆಡ್ ಕ್ರಾಸ್ತಾ ಮಾತನಾಡಿ, ಕನ್ನಡ ನಾಡು, ನುಡಿ , ಸಾಹಿತ್ಯವನ್ನು  ವಿಶ್ವಕ್ಕೆ ಪಸರಿಸುವಲ್ಲಿ ಕುವೆಂಪು ಅವರ ಸಾಹಿತ್ಯದ ಕೊಡುಗೆ ಅಪಾರವೆಂದು ಬಣ್ಣಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಾಹಿತಿ ಬಿ.ಎ. ಷಂಶುದ್ದೀನ್ ಉಪಸ್ಥಿತರಿದ್ದರು.

ಕವಿ ಗೋಷ್ಠಿ- ಸಭಾ ಕಾರ್ಯಕ್ರಮದ ಬಳಿಕ ಸಾಹಿತಿ ಬಿ.ಎ. ಷಂಶುದ್ದೀನ್ ಅಧ್ಯಕ್ಷತೆಯಲ್ಲಿ ನಡೆದ ‘ವಿಶ್ವ ಮಾನವ ಸಂದೇಶ’ ವಿಷಯದ ಕುರಿತ ಕವಿ ಗೋಷ್ಠಿಯಲ್ಲಿ ಕೊಡಗಿನ ಖ್ಯಾತ ಕವಿಗಳು ಕವನಗಳನ್ನು ವಾಚಿಸಿ ಗಮನ ಸೆಳೆದರು.

ಖ್ಯಾತ ಗಾಯಕ ಲಿಯಾಕತ್ ಆಲಿ ನಾಡಗೀತೆಯನ್ನು ಹಾಡಿದರು. ಬಳಗದ ಪದಾಧಿಕಾರಿ ಎಸ್.ಐ. ಮುಇನೀರ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿ, ಕೊಡಗು ಪತ್ರಿಕಾ ಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಸ್ವಾಗತಿಸಿದರು. ಚಂದನ್ ಕಾಮತ್ ಅವರು ಕುವೆಂಪು ಅವರು ಅನುವಾದ ಮಾಡಿದ ಸ್ವಾಮಿ ವಿವೇಕಾನಂದರ  ‘ಸಾಂಗ್ ಆಫ್ ಸನ್ಯಾಸಿ’ ಕವನದ ಕನ್ನಡ ಅನುವಾದವನ್ನು ವಾಚಿಸಿದರು.   (ಕೆಸಿಐ,ಎಸ್.ಎಚ್)

Leave a Reply

comments

Related Articles

error: