ಪ್ರಮುಖ ಸುದ್ದಿ

ಚಿತ್ರರಂಗದ ಹಿರಿಯರನ್ನು ಕಳೆದುಕೊಂಡು ನಾವು ಖಾಲಿಯಾಗುತ್ತಾ ಹೋಗುತ್ತಿದ್ದೇವೆ : ಎಸ್. ರಾಘವೇಂದ್ರ ರಾವ್

ರಾಜ್ಯ(ಬೆಂಗಳೂರು)ಡಿ.31;- ಚಿತ್ರರಂಗದ ಹಿರಿಯರನ್ನು ಕಳೆದುಕೊಂಡು ನಾವು ಖಾಲಿಯಾಗುತ್ತಾ ಹೋಗುತ್ತಿದ್ದೇವೆ ಎಂದು ಸಾಹಿತಿ ಚಿಂತಕ ಡಾ.ಹೆಚ್. ಎಸ್. ರಾಘವೇಂದ್ರ ರಾವ್ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜನ ಪ್ರಕಾಶನ ವತಿಯಿಂದ ಆಯೋಜಿಸಿದ್ದ, ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪನವರ ’ಜನಪದ ನಾಯಕ ಡಾ.ರಾಜಕುಮಾರ್’ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಕನ್ನಡ ನಾಡಿಗೆ ಬೆಳಕಾಗಿ, ನಾವು ಹೇಗೆ ಬದುಕಬೇಕು ಎನ್ನುವುದನ್ನು ಡಾ. ರಾಜ್‌ಕುಮಾರ್ ಹೇಳಿ ಕೊಟ್ಟಿದ್ದಾರೆ ಅವರೊಬ್ಬರು ಜನಪರ ನಾಯಕ. ಅವರ ಬಾಂಧವ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ಪುಸ್ತಕ  ಹೊರತಂದಿರುವುದು ಸಂತಸ ತಂದಿದೆ ಎಂದು ಬಣ್ಣಿಸಿದರು.

ಪುಸ್ತಕದ ವಸ್ತುವಾದ ಡಾ.ರಾಜಕುಮಾರ್  ಅಥವಾ ಬರಗೂರು ಅಥವಾ ಈ ಪುಸ್ತಕದ ಬಗ್ಗೆ ಮಾತನಾಡುವುದೋ ಎಂಬ ಗೊಂದಲವಿತ್ತು ಎಂದ ಅವರು, ಈ ಪುಸ್ತಕ ಜೀವನ ಚರಿತ್ರೆ, ವಿಮರ್ಶೆಯಲ್ಲ.ಬದಲಾಗಿ, ಇದು ಒಂದು ಪ್ರೀತಿಯ ಕಥೆ ಎಂದರು. ದೂರದ ಹಳ್ಳಿಯಿಂದ ಬಂದ ವ್ಯಕ್ತಿಯೊಬ್ಬ ಕನ್ನಡ ಚಿತ್ರರಂಗದಲ್ಲಿ ಜೀವಿಸಿದ ಪ್ರೀತಿಯ ಕಥೆ ಇದು. ಈ ಪುಸ್ತಕದಲ್ಲಿ ರಾಜಕುಮಾರ್ ಅಂತರಂಗ, ಮನುಷ್ಯತ್ವ,  ವಿನಯದ ಹಾದಿಯನ್ನು ಬಿಂಬಿಸುವಲ್ಲಿ ಬರಗೂರು ಯಶಸ್ವಿಯಾಗಿದ್ದಾರೆ ಎಂದು ನುಡಿದರು.

ರಾಜಕುಮಾರ್ ಇದ್ದರೂ, ಇದು ರಾಜ ಪ್ರಭುತ್ವವಲ್ಲಾ.ಬದಲಾಗಿ, ಅವರ ವ್ಯಕ್ತಿತ್ವ ಪ್ರಜಾಪ್ರಭುತ್ವ. ವಿನಯಕ್ಕೆ ವಿದ್ವತ್ತಿನ ಸ್ಥಾನ ದೊರಕಿಸಿಕೊಟ್ಟವರು ಡಾ. ರಾಜ್.ಇನ್ನೂ, ಅವರ ಬದುಕು ನಟನೆಯಾಗಿರಲಿಲ್ಲ. ಹೀಗೆ, ಬರಗೂರು ಅವರ ಈ  ಪುಸ್ತಕದಲ್ಲಿ ರಾಜಕುಮಾರ್ ಮಾತುಗಳು ಮೂಡಿ ಬಂದಿವೆ. ಒಂದೊಂದು ವಾಕ್ಯವೂ  ಒಂದು ಸಂದೇಶದಂತೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿನಿಮಾ ಮತ್ತು ಸಾಹಿತ್ಯದಲ್ಲಿ ಬೇರೆ ಬೇರೆ ರೀತಿಯಾಗಿಯೇ ಸಾಧನೆ ಮಾಡಬಹುದು ಎಂದ ಅವರು, ಕುವೆಂಪು ಮತ್ತು ರಾಜಕುಮಾರ್ ಅವರನ್ನು ಒಟ್ಟಿಗೆ ಇಟ್ಟಿರೋದು ಈ ಪುಸ್ತಕದ ವಿಶೇಷವಾಗಿದೆ. ಈ ಪುಸ್ತಕ ಕೇವಲ ನೆನಪುಗಳ ಸರ ಮಾಲೆಯಲ್ಲ, ಇದು ಸಂಶೋಧನೆ ಎಂದರು.

ನಟಿ ತಾರಾ ಅನೂರಾಧ ಮಾತನಾಡಿ, ನನ್ನನ್ನು ಕಲಾತ್ಮಕ ಚಿತ್ರಗಳಲ್ಲಿ ತೋರಿಸಿ ಕೊಟ್ಟವರು ಬರಗೂರು, ನಾನು ಅವರನ್ನು ಮೇಷ್ಟ್ರೇ ಎಂದು ಕರೆಯುತ್ತೇನೆ ಎಂದರು.

ನನ್ನ ಅತ್ತೆಯವರಿಗೆ ರಾಜಕುಮಾರ್ ಅಂದರೆ ಇಷ್ಟ. ಮದುವೆಯಾದ ಹೊಸದರಲ್ಲಿ ಪತಿ,  ಅತ್ತೆಯೊಂದಿಗೆ ರಾಜಕುಮಾರ್ ಅವರ ಮನೆಗೆ ಹೋಗಿದ್ದೆವು. ಆ ಸಂದರ್ಭದಲ್ಲಿ ನನ್ನ ಅತ್ತೆ,  ರಾಜಕುಮಾರ್ ಅವರ ಜೊತೆ ಮಾತನಾಡಬೇಕೆಂದರು. ಬಳಿಕ ಅತ್ತೆ, ರಾಜ್‌ಕುಮಾರ್ ಅವರನ್ನು ಮಾತನಾಡುತ್ತಾ, ನಿಮ್ಮ ಹಲ್ಲು ಕಟ್ಟಿಸಿಕೊಂಡಿದ್ದಾ ಅಥವಾ ನಿಜವಾದದ್ದಾ? ಎಂದು ಪ್ರಶ್ನೆ ಮಾಡಿದರು.ಆದರೆ, ರಾಜಕುಮಾರ್ ಸಿಟ್ಟಾಗದೇ ನಗುತ್ತಾ, ಕಟ್ಟಿಸಿಕೊಂಡಿದ್ದು ಎಂದರು. ಆದರೆ, ಆಗ ನನಗೆ ಭಯ ಆಗಿತ್ತು ಎಂದು ತಾರಾ ನೆನೆದರು.

ಕಾರ್ಯಕ್ರಮದಲ್ಲಿ ಗಾಯಕಿ, ಡಾ.ಶಮೀತಾ ಮಲ್ನಾಡ್ ಅವರ ತಂಡ ಡಾ.ರಾಜ್ ಕುಮಾರ್ ಅವರ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿತು. ಜನ ಪ್ರಕಾಶನದ ಶೇಖರ ಮೂರ್ತಿ, ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ, ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಪ್ರಮುಖರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: