ಪ್ರಮುಖ ಸುದ್ದಿಮೈಸೂರು

ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರ ದಂಡು : ಸಫಾರಿಗೆ ಅವಕಾಶ

ಮೈಸೂರು,ಡಿ.31:- ಹಚ್ಚ ಹಸಿರಿನ ಮೈಸಿರಿ, ಬೆಟ್ಟಗುಡ್ಡ, ಕಣಿವೆಗಳ ಮೂಲಕ ಹಾದು ಹೋಗುವ ರಸ್ತೆ ಮಾರ್ಗ. ವನ್ಯಜೀವಿ ತಾಣಕ್ಕೆ ಪ್ರಯಾಣಿಸುತ್ತಿರುವ ಪ್ರವಾಸಿಗರ ವಾಹನಗಳು. ದಟ್ಟ ಕಾನನದ ನಡುವೇ ಸ್ವಚ್ಛಂದವಾಗಿ ನಲಿದಾಡುತ್ತಿರುವ ವನ್ಯಜೀವಿ ಸಂಕುಲ. ಇದು ಗಂಡ್ಲುಪೇಟೆ ತಾಲೂಕಿನ ಬಂಡಿಪುರ ರಾಷ್ಟ್ರೀಯ ಉದ್ಯಾನವನ ದಲ್ಲಿ ಕಂಡು ಬಂದ ದೃಶ್ಯ.

ತಾಲೂಕಿನಿಂದ 15 ಕಿ.ಮೀ ದೂರದಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಕ್ರಿಸ್‍ಮಸ್ ರಜೆ ಹಾಗೂ ವರ್ಷಾಂತ್ಯದ ಹಿನ್ನೆಲೆಯಲ್ಲಿ ಪ್ರವಾಸಿ ಗರ ದಂಡೇ ಹರಿದು ಬರುತ್ತಿದೆ.

ಪ್ರತಿದಿನ ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಬಂಡೀಪುರಕ್ಕೆ ಆಗಮಿಸುತ್ತಿರುವ ಪ್ರವಾಸಿಗರು ಬೆಳಿಗ್ಗೆ 7.30 ರಿಂದ 9.30ರವರೆಗೆ ಸಫಾರಿಗೆ ತೆರಳಿ ಹಸಿರು ಸೊಬಗಿನ ಜೊತೆ ಆನೆಗಳ ಹಿಂಡು, ಕಾಡೆಮ್ಮೆ, ಜಿಂಕೆ ಮತ್ತು ನವಿಲು ಸೇರಿ ದಂತೆ ವನ್ಯ ಮೃಗಗಳನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ.

ಇದೇ ರೀತಿಯಾಗಿ ಸಂಜೆಯ 4.30ರ ಸಫಾರಿಗೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂಡೀಪುರದ ಸ್ವಾಗತ ಕಚೇರಿ ಮುಂಭಾಗದಲ್ಲಿರುವ ಟಿಕೇಟ್ ಕೌಂಟರ್‍ನ ಮುಂದೆ ಜಮಾಯಿಸಿ ಮಕ್ಕಳೊಂದಿಗೆ ಸಫಾರಿಗೆ ತೆರಳಿ ಪ್ರಕೃತಿಯ ಸವಿಯನ್ನು ಸವಿದು ಸಂಭ್ರಮಿಸುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಬೆಳಿಗ್ಗೆಯಿಂದಲೇ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಸಫಾರಿ ವಾಹನಗಳನ್ನು ಸಮಯಕ್ಕೆ ಸರಿಯಾಗಿ ಕಳುಹಿಸುವುದರೊಂದಿಗೆ ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಪ್ರತಿ ದಿನವೂ ಪ್ರವಾಸಿಗರು ಆಗಮಿಸುವ ಈ ಉದ್ಯಾನವನದಲ್ಲಿ ಎಲ್ಲಿ ನೋಡಿದರಲ್ಲಿ ಹಸಿರು ಎದ್ದು ಕಾಣುತ್ತಿದೆ. ಅದರೊಂದಿಗೆ ಬೆಳಿಗ್ಗೆ ಹಾಗೂ ಸಂಜೆಯಾಗುತ್ತಿದ್ದಂತೆಯೇ ರಸ್ತೆಯ ಬದಿಯಲ್ಲಿ ಬೆಳೆದಿರುವ ಹಸಿರು ಹುಲ್ಲನ್ನು ಮೇಯಲು ಆಗಮಿಸುವ ಚುಕ್ಕಿ ಜಿಂಕೆ  ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಗೋಪಾಲನ ಸನ್ನಿಧಿಗೂ ಲಗ್ಗೆ

ಇಲ್ಲಿಯೇ ಸಮೀಪದಲ್ಲಿರುವ ಹಿಮ ವದ್ ಗೋಪಾಲಸ್ವಾಮಿ ಬೆಟ್ಟಕ್ಕೂ ಪ್ರವಾಸಿಗರು ತಂಡೋಪತಂಡವಾಗಿ ಲಗ್ಗೆ ಇಡುತ್ತಿದ್ದಾರೆ. ಸರದಿ ಸಾಲಿನಲ್ಲಿ ನಿಂತು ಹಿಮವದ್ ಗೋಪಾಲಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಕುಟುಂಬ ಸಮೇತರಾಗಿ ಆಗಮಿಸುತ್ತಿರುವ ಪ್ರವಾಸಿಗರು ಬಂಡೀಪುರ ಮತ್ತು ಮಧುಮಲೈ ಅರಣ್ಯ ಪ್ರದೇಶಗಳಿಗೂ ತೆರಳುತ್ತಿದ್ದ ದೃಶ್ಯ ಕಂಡು ಬರುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: