ಕರ್ನಾಟಕ

ಹೊಸ ವರ್ಷಾಚರಣೆ: ಕಿಡಿಗೇಡಿತನ ಮಾಡಿದರೆ ಜೈಲು ಶಿಕ್ಷೆ

ಬೆಂಗಳೂರು,ಡಿ.31-ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜುಗೊಂಡಿದೆ. ಸಂಭ್ರಮಾಚರಣೆ ವೇಳೆ ಕಿಡಿಗೇಡಿತನ ನಡೆಸುವವರು ಜೈಲು ಸೇರಲಿದ್ದಾರೆ.

ಹೌದು, ಕಿಡಿಗೇಡಿ ಕೃತ್ಯ ನಡೆಸಿದರೆ ಜಾಮೀನು ಸಿಗದಂತಹ ಕಲಂಗಳಲ್ಲಿ ಪ್ರಕರಣ ದಾಖಲಿಸಲಾಗುವುದು, ವರ್ಷಗಳ ಕಾಲ ಜೈಲಿನಲ್ಲಿ ಕಳೆಯಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಪೊಲೀಸರು ಈ ಬಾರಿ ಬಿಗಿ ಭದ್ರತಾ ವ್ಯವಸ್ಥೆ, ಕಣ್ಗಾವಲು ಸಜ್ಜುಗೊಳಿಸಿದ್ದಾರೆ. ಕಿಡಿಗೇಡಿ ಕೃತ್ಯಗಳನ್ನು ಪತ್ತೆ ಹಚ್ಚಲು ಅತ್ಯಾಧುನಿಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಹೊಸ ವರ್ಷಾಚರಣೆ ಅದ್ಧೂರಿಯಾಗಿ ನಡೆಯುವ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಮಾತ್ರವಲ್ಲದೆ ಚರ್ಚ್‌ಸ್ಟ್ರೀಟ್‌, ಇಂದಿರಾನಗರ, ಮಾರತ್ತಳ್ಳಿ, ಜಯನಗರ ಮತ್ತಿತರ ಕಡೆ ಪೊಲೀಸರು ಭಾರಿ ಕಟ್ಟೆಚ್ಚರ ವಹಿಸಲಿದ್ದಾರೆ. ಮಫ್ತಿಯಲ್ಲಿ ಸಾವಿರಾರು ಪೊಲೀಸರು ನಿಗಾ ವಹಿಸಲಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚುವರಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಯುವತಿಯರ ಮೈ ಮುಟ್ಟಿ ಕಿಡಿಗೇಡಿತನ ಪ್ರದರ್ಶಿಸಲು ಎಂಜಿ ರಸ್ತೆಗೆ ಬರುವವರು ಕೆಲವರ ಮೇಲೆ ನಿಗಾ ಇಡಲು ನೂರಾರು ಸಂಖ್ಯೆಯಲ್ಲಿ ಮಹಿಳಾ ಪೊಲೀಸರು ಮಫ್ತಿಯಲ್ಲೇ ಕಾರ್ಯನಿರ್ವಹಿಸಲಿದ್ದಾರೆ. ಕೈ ಸನ್ನೆ, ಕಣ್ಸನ್ನೆ ಮಾಡಿದರೆ ಲಾಠಿ ರುಚಿ ಜತೆಗೆ ಕೇಸ್‌ ಪಕ್ಕಾ. ಅಲ್ಲಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಇಡಲಾಗಿದ್ದು, ಪೊಲೀಸರು ನಿರಂತರವಾಗಿ ವೀಕ್ಷಣೆ ಮಾಡಲಿದ್ದಾರೆ. ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಯಂತಹ ಪ್ರಮುಖ ರಸ್ತೆಗಳಲ್ಲದೆ ಈ ರಸ್ತೆಗಳಿಗೆ ಹೊಂದಿಕೊಂಡಿರುವ ರಸ್ತೆಗಳು, ಸಂಪರ್ಕ ಮಾರ್ಗಗಳಲ್ಲೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

ನಗರ ಕಮಿಷನರೇಟ್‌ನ ಸುಮಾರು 2500ಕ್ಕೂ ಹೆಚ್ಚು ವಾಹನಗಳು ಡಿ.31ರ ಸಂಜೆ 7 ಗಂಟೆಯಿಂದ ಜ.1ರ ಬೆಳಗಿನವರೆಗೂ ಕರ್ತವ್ಯದಲ್ಲಿರುತ್ತವೆ. 270 ಹೊಯ್ಸಳ, 1700 ಚೀತಾ ಮತ್ತು ಎಲ್ಲ ಪೊಲೀಸ್‌ ಜೀಪ್‌ಗಳು ರಾತ್ರಿ ಪಾಳಿ ಗಸ್ತು ನಡೆಸಲಿವೆ. ಸೂಕ್ಷ್ಮ ಪ್ರದೇಶಗಳಲ್ಲಿ ಅಧಿಕಾರಿಗಳು ಸವೀರ್‍ಸ್‌ ರಿವಾಲ್ವರ್‌ ಮತ್ತು ಬಂದೂಕುಗಳ ಜತೆಗೇ ಕರ್ತವ್ಯ ನಿರ್ವಹಿಸಲಿದ್ದಾರೆ.

ಕರ್ತವ್ಯ ನಿರತ ಪೊಲೀಸರೆಲ್ಲರ ಕೈಯಲ್ಲಿ ವಿಡಿಯೊ ಕ್ಯಾಮೆರಾಗಳಿರುತ್ತವೆ. ಪೊಲೀಸರ ಜತೆ ಅನುಚಿತವಾಗಿ ವರ್ತಿಸಿದರೆ ಅದನ್ನು ಚಿತ್ರೀಕರಿಸುತ್ತಾರೆ. ಮರುದಿನ ಅದು ಟಿವಿಗಳಲ್ಲಿ ಪ್ರಸಾರವಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಈ ಹಿಂದೆ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್‌, ಇಂದಿರಾ ನಗರ ಸೇರಿದಂತೆ ನಾನಾ ಕಡೆ ಯುವತಿಯರ ಮೇಲೆ ದೌರ್ಜನ್ಯ ನಡೆಸಿ ಸಿಕ್ಕಿಬಿದ್ದವರು ವರ್ಷಗಳ ಕಾಲ ಜೈಲಲ್ಲಿ ಕಳೆದಿದ್ದಾರೆ. 2016ರಲ್ಲಿ ಕಮ್ಮನಹಳ್ಳಿಯಲ್ಲಿ ಯುವತಿ ಮೇಲೆ ದೌರ್ಜನ್ಯ ನಡೆಸಿದವರಿಗೆ 20 ತಿಂಗಳು ಜಾಮೀನೇ ಸಿಕ್ಕಿರಲಿಲ್ಲ. (ಎಂ.ಎನ್)

 

Leave a Reply

comments

Related Articles

error: