ಮನರಂಜನೆ

ನಕ್ಕುನಗಿಸಲು ತಯಾರಾಗಿದ್ದಾನೆ ಬಸವನಗುಡಿಯ ‘ಲಂಬೋದರ’

ಬೆಂಗಳೂರು (ಡಿ.31): ಲೂಸ್ ಮಾದ ಖ್ಯಾತಿಯ ಯೋಗಿ ಬಸವನಗುಡಿಯ ಲಂಬೋದರನಾಗಿ ಕನ್ನಡ ಚಿತ್ರಪ್ರೇಮಿಗಳನ್ನು ನಕ್ಕುನಗಿಸಲು ಬರ್ತಿದಾರೆ. ಬಿಡುವಿಲ್ಲದೆ ತಯಾರು ಮಾಡಿದ ಈ ಚಿತ್ರದ ಬಗ್ಗೆ ಲೂಸ್ ಮಾದ ಯೋಗಿ ಕೆಲವು ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಮದುವೆಯಾಗಿ ಈಗ ನಾಲ್ಕು ದಿನವಷ್ಟೇ ಆಗಿದೆ. ಆಗಲೇ ಶೂಟಿಂಗ್‌ಗೆ ಹೋಗಬೇಕಾ ಎಂದು ಯೋಗಿ ಅರೆ ಕ್ಷಣ ಅಯ್ಯೋ ಅಂದುಕೊಂಡರೂ ಹೋಗಲೇಬೇಕಿತ್ತು. ಯಾಕೆಂದರೆ ಆಗ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಯುತ್ತಿರುತ್ತೆ. ಇದಕ್ಕೂ ಚಿತ್ರಕ್ಕೂ ಏನು ಸಂಬಂಧ ಎಂದರೆ ಇಡೀ ಚಿತ್ರ ಸಾಗುವುದು ಬಸವನಗುಡಿಯಲ್ಲಿ. ಹೆಸರೇ ಹಾಗಿದೆ ‘ಲಂಬೋದರ, ಬಸವನಗುಡಿ ಬೆಂಗಳೂರು’ ಎಂದು. ಇದೆಲ್ಲವನ್ನೂ ಹೇಳಿಕೊಂಡಿದ್ದು ಸ್ವತಃ ಯೋಗಿ.

ಚಿತ್ರದಲ್ಲಿ ಯೋಗಿ ಮೂರು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸರಿಯಾಗಿ ಒಂದು ವರ್ಷ ಟೈಂ ತೆಗೆದುಕೊಂಡು ಚಿತ್ರ ಕಂಪ್ಲೀಟ್ ಮಾಡಿದ್ದೇವೆ’ ಎಂದು ಹೇಳಿಕೊಂಡರು. ಟ್ರಾವೆಲ್ ಉದ್ಯಮದಲ್ಲಿ ಹೆಸರು ಮಾಡಿರುವ ರಾಘವೇಂದ್ರ ಅವರು ಈಗ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಇಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಯುವ ಪ್ರತಿಭೆ ಕಾರ್ತಿಕ್ ಶರ್ಮಾಗೆ ಇದು ಮೊದಲ ಕಮರ್ಷಿಯಲ್ ಚಿತ್ರ.

ಮಿಡಲ್ ಕ್ಲಾಸ್ ಫ್ಯಾಮಿಲಿ, ಎಲ್ಲಕ್ಕೂ ಲೆಕ್ಕಾಚಾರ, ಸ್ಕೂಲು, ಕಾಲೇಜಿನ ತರಲೆ, ಮಧುರವಾದ ಪ್ರೇಮವನ್ನು ಹೊತ್ತ ‘ಲಂಬೋದರ’ ಪೂರ್ಣ ತಯಾರಾಗಿರುವುದು ಬೆಂಗಳೂರಿನ ಅದರಲ್ಲೂ ಮುಖ್ಯವಾಗಿ ಬಸವನಗುಡಿಯ ಬೀದಿಗಳಲ್ಲಿ. ಅರವಿಂದ್ ಕಶ್ಯಪ್ ಕ್ಯಾಮರಾ ಕೈಚಳಕವಿರುವ ಚಿತ್ರದಲ್ಲಿ ನಾಯಕನನ್ನು ಇಕ್ಕಟ್ಟಿಗೆ ಸಿಲುಕಿಸಿ ಮಜಾ ನೋಡುವ ಜೊತೆಗೆ ನೋಡುಗರನ್ನೂ ನಗಿಸಲು ಧರ್ಮಣ್ಣ ಇದ್ದಾರೆ. ಅಂಬರೀಷ್ ನೆನಪಿನಲ್ಲಿ ಆಡಿಯೋ ಬಿಡುಗಡೆ ಮಾಡಿಕೊಂಡ ಚಿತ್ರ ತಂಡದ ಜೊತೆಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಚಿನ್ನೇಗೌಡ, ಕರಿಸುಬ್ಬು, ಶ್ಯಾಮ್ ಮೊದಲಾದವರು ಜೊತೆಗಿದ್ದರು. (ಎನ್.ಬಿ)

Leave a Reply

comments

Related Articles

error: