ಪ್ರಮುಖ ಸುದ್ದಿಮೈಸೂರು

ಸ್ವಾರ್ಥಕ್ಕಾಗಿ ದೇಶದ ಜನರನ್ನು ಬಲಿಪಶು ಮಾಡಬಾರದು : ಮಾಜಿ ಪಿಎಂ ಹೆಚ್.ಡಿ.ದೇವೆಗೌಡ

ದೇಶದ ಆಡಳಿತ ನಡೆಸುವವರಿಗೆ ನಾಡಿನ ಜನರ ಅರಿವಿನ ಅಗತ್ಯ ಮುಖ್ಯ, ಅದನ್ನು  ಬಿಟ್ಟು ತಮ್ಮ ಸ್ವಾರ್ಥಕ್ಕಾಗಿ ದೇಶದ ಜನರನ್ನು ಬಲಿಪಶುಮಾಡಬಾರದು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡ ಹೆಚ್.ಡಿ.ದೇವೆಗೌಡ ಮಾತಾನಾಡಿದರು.  ಮೋದಿಯವರು ಏಕಾಏಕಿ ನೋಟ್ ನಿಷೇಧಿಸುವ ಮೂಲಕ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.  ಮುಂದಿನ ದಿನಗಳಲ್ಲಿ ಜನತೆಯೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ನಾನು ರೈತರ ಮಗ. ನನ್ನ ಕೊನೆ ಉಸಿರಿರುವವರೆಗೂ ಈ ದೇಶದ ಜನರಿಗಾಗಿ ಹೋರಾಟಮಾಡುತ್ತೇನೆಯೆ ಹೊರತು ವಿರಮಿಸುವುದಿಲ್ಲ ಎಂದರು.

ನನ್ನ ಸ್ನೇಹಿತ ಇಬ್ರಾಹಿಂ ಇತ್ತೀಚೆಗೆ ನಿರಾಶವಾದಿ ಆಗಿದ್ದಾರೆ.ಆದರೆ ಏಕೆ ಎಂಬುದು ಗೊತ್ತಿಲ್ಲ. ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಇಬ್ರಾಹಿಂ ಅವರು ನಿರಾಶವಾದದಿಂದ ಹೊರ ಬರಬೇಕೆಂದು ಸಲಹೆ ನೀಡಿದರು. ನನಗೆ ಈಗಲೂ ಪ್ರಧಾನಮಂತ್ರಿಯಾಗಿ ದೇಶವನ್ನು ಮುನ್ನಡೆಸುವ ಶಕ್ತಿಯಿದೆ.ಆದರೆ ನಾನು  ಪ್ರಧಾನಿಯಾದಾಗ ಜೊತೆಯಲ್ಲಿದ್ದವರು ಈಗ ಇಲ್ಲ. ಈ ಮೊದಲು ನಾನು ಆಕಸ್ಮಿಕವಾಗಿ ಪ್ರಧಾನಿಯಾದೆ.ನಾನು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹಲವು ರೀತಿಯ ಜಟಿಲ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ.ಜಮ್ಮು ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದೇನೆ.
ಜಮ್ಮು ಕಾಶ್ಮೀರ ಸಮಸ್ಯೆ ಬಗೆಹರಿಸುವ ಸಲುವಾಗಿ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿಶಾ ಗಿಲಾನಿಯನ್ನು 6 ಬಾರಿ ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ.ಗೌಪ್ಯವಾಗಿಟ್ಟಿದ್ದ ಈ ವಿಷಯವನ್ನು ಇಂದು ಬಹಿರಂಗಗೊಳಿಸಿದ್ದೇನೆಂದು ಎಂದರಲ್ಲದೇ, ನಾನು ಇಷ್ಟೊಂದು ಎತ್ತರಕ್ಕೆ ಬೆಳೆಯಲು ನನ್ನ ಪತ್ನಿ ಚೆನ್ನಮ್ಮ ಕಾರಣ ಎಂದರು.

ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ ಇಬ್ರಾಹಿಂ ತಮ್ಮ ಮಾತಿನುದ್ದಕ್ಕೂ ದೇವೆಗೌಡರನ್ನು ಹೊಗಳಿದರು. ಸಂಕ್ರಾಂತಿ ಹಬ್ಬದ ನಂತರ ತನ್ನ ಮುಂದಿನ ನಡೆಯನ್ನು ತಿಳಿಸುತ್ತೇನೆ ಎಂದರಲ್ಲದೇ, ಪ್ರೊ.ರಂಗಪ್ಪ ಅವರನ್ನು ರಾಜಕೀಯಕ್ಕೆ ಬರುವಂತೆ ಆಹ್ವಾನಿಸಿದರು.

ಕಾರ್ಯಕ್ರಮದಲ್ಲಿ ಪ್ರೊ.ರಂಗಪ್ಪ ದಂಪತಿಯನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಸುತ್ತೂರು ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ  ನಿರ್ಮಲಾನಂದನಾಥ ಸ್ವಾಮೀಜಿ , ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗ್ಡೆ, ಸಂಗೀತ ನಿರ್ದೇಶಕ ಹಂಸಲೇಖ, ನಾಡೋಜ ಪ್ರೊ.ಹಂ.ಪ.ನಾಗರಾಜಯ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: