ಮೈಸೂರು

ಬಾಲ್ಯ ವಿವಾಹ ತಡೆಗಟ್ಟಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಚರ್ಚೆ: ವಾಟ್ಸ್’ಆ್ಯಪ್ ಗುಂಪು ರಚಿಸಲು ಸೂಚನೆ

ಬಾಲ್ಯವಿವಾಹದ ಬಗ್ಗೆ ವಿವಾಹ ನಡೆಯುವ 2 ಅಥವಾ 3 ಗಂಟೆಗಳಿರುವಾಗ ಸ್ವಯಂ ಸೇವಾ ಸಂಸ್ಥೆ ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ತಿಳಿಯುತ್ತದೆ.  ಸ್ಥಳಕ್ಕೆ ತಲುಪುವುದರ ಒಳಗಾಗಿ ಬಾಲ್ಯವಿವಾಹ ನಡೆದೆ ಬಿಟ್ಟಿರುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚು ಎಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಬಾಲ್ಯವಿವಾಹ ನಿಷೇಧ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು.

ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಬಾಲ್ಯವಿವಾಹವನ್ನು ತಡೆಗಟ್ಟಲು ಗ್ರಾಮ, ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳನ್ನು ಗುರುತಿಸಿ ಅವರ ಮೊಬೈಲ್’ಸಂಖ್ಯೆ ಪಡೆದು ವಾಟ್ಸ್’ಆ್ಯಪ್ ಗುಂಪು ರಚಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರಾಧ ಅವರಿಗೆ ತಿಳಿಸಿದರು.

ವಾಟ್ಸ್’ಆ್ಯಪ್ ಗುಂಪಿನಲ್ಲಿ ನೀವು ಮಾಹಿತಿಯನ್ನು ಶೀಘ್ರವಾಗಿ ರವಾನಿಸಬಹುದು ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಬಹುದು. ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ ಶೀಘ್ರವಾಗಿ ಪರಿಹರಿಸಿಕೊಳ್ಳಬಹುದು. ಬಾಲ್ಯವಿವಾಹ ತಡೆಗಟ್ಟಿದ ಸಂದರ್ಭ ಪೋಷಕರಿಂದ ಮುಚ್ಚಳಿಕೆ ಪತ್ರ ಪಡೆಯಲಾಗುವುದು. ಮುಚ್ಚಳಿಕೆ ಪತ್ರ ಪಡೆದ ಪ್ರಕರಣದ ಬಗ್ಗೆ ನಿಗಾ ವಹಿಸಬೇಕು. ಮುಚ್ಚಳಿಕೆ ಪತ್ರ ಬರೆದುಕೊಟ್ಟ ನಂತರವು ಬಾಲ್ಯ ವಿವಾಹ ಮಾಡಿದ ಪ್ರಕರಣಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗನ್ನು ತಡೆಗಟ್ಟಲು ಹಲವಾರು ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಶಾಲೆಗಳಲ್ಲೂ ಸಹ ನಿರಂತರವಾಗಿ ಶಾಲೆಗೆ ಬಾರದ ವಿದ್ಯಾರ್ಥಿನಿಯರ ಬಗ್ಗೆ ಗಮನ ಹರಿಸಲಾಗುತ್ತಿದೆ. ಕೆಲವು ಜನಾಂಗದವರು ಮೂಢನಂಬಿಕೆಯಿಂದ ಇನ್ನೂ ಬಾಲ್ಯ ವಿವಾಹದಂತಹ ಕೆಟ್ಟ ಪದ್ಧತಿ ಅನುಸರಿಸುತ್ತಿದ್ದರೆ, ಇವರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಆರ್.ಎಲ್.ಹೆಚ್.ಪಿ ಸಂಸ್ಥೆಯ ಸರಸ್ವತಿ ಅವರು ಮಾತನಾಡಿ, ಮಕ್ಕಳ ಸಹಾಯವಾಣಿ 1098 ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಸಹಾಯವಾಣಿಯ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಸಹಾಯವಾಣಿ ಸಂಖ್ಯೆಯ ಫಲಕವನ್ನು ಅಳವಡಿಸಬೇಕು ಎಂದರು.

ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿಯಲ್ಲಿ 610 ಕರೆಗಳನ್ನು ಸ್ವೀಕರಿಸಿದ್ದು, 464 ಪ್ರಕರಣಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ. ಇವುಗಳಲ್ಲಿ ಬಾಲ್ಯವಿವಾಹ ಕುರಿತು 51, ಕಾಣೆಯಾದ ಮಕ್ಕಳ ಬಗ್ಗೆ 18, ಬಾಲಕಾರ್ಮಿಕ ಪದ್ಧತಿಯ ಬಗ್ಗೆ- 67, ಶಾಲೆ ಬಿಟ್ಟ ಮಕ್ಕಳ ಬಗ್ಗೆ 86 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಶಂಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪದ್ಮ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: