ಮೈಸೂರು

2018ಕ್ಕೆ ಶುಭ ವಿದಾಯ 2019ಕ್ಕೆ ಸ್ವಾಗತ : ಯೋಗಾನರಸಿಂಹ ಸ್ವಾಮಿದೇವಸ್ಥಾನದಲ್ಲಿ ಭಾಷ್ಯಂ ಸ್ವಾಮೀಜಿ ನೇತೃತ್ವದಲ್ಲಿ ಲಡ್ಡು ವಿತರಣೆ

ಮೈಸೂರು,ಜ.1:- 2018ಕ್ಕೆ ಶುಭ ವಿದಾಯ ಹೇಳಿ 2019ನೇ ವರ್ಷಕ್ಕೆ ಸ್ವಾಗತ ಕೋರಿದ ಈ ಶುಭ ಅವಸರದಲ್ಲಿ ಹೊಸ ವರ್ಷಾಚರಣೆಯ ಪ್ರಯುಕ್ತ ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬೆಳಗಿನ ಜಾವ 4ರಿಂದ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದು ಬರುವ ಭಕ್ತಾದಿಗಳಿಗೆ ಲಡ್ಡನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತಿದೆ. ಬೆಳಿಗ್ಗಿನಿಂದಲೇ ಇಲ್ಲಿ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ಕಳೆದ ಹಲವಾರು ವರ್ಷಗಳಿಂದ ತಪ್ಪದೇ ಲಡ್ಡು ಪ್ರಸಾದ ವಿತರಣೆಯ ಕಾರ್ಯವನ್ನು ಪ್ರೊ.ಭಾಷ್ಯಂ ಸ್ವಾಮೀಜಿ ನೆರವೇರಿಸಿಕೊಂಡು ಬರುತ್ತಿದ್ದು, ಈ ಬಾರಿ ಎರಡು ಲಕ್ಷ ಲಡ್ಡುಗಳನ್ನು ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ವಿತರಿಸಲಾಗುತ್ತಿದೆ. ಸ್ವತಃ ಭಾಷ್ಯಂ ಸ್ವಾಮೀಜಿಯವರೇ ನಿಂತು  ಭಕ್ತರಿಗೆ ಪ್ರಸಾದ ವಿತರಿಸುತ್ತಿರುವುದು ಕಂಡು ಬಂತು. ಭಕ್ತರು ಸರತಿಯ  ಸಾಲಿನಲ್ಲಿ  ಮೈಲಿಗಟ್ಟಲೇ ರಸ್ತೆಯುದ್ದಕ್ಕೂ ನಿಂತಿದ್ದರು. ಶ್ರೀ ಯೋಗಾ ನರಸಿಂಹ ಸ್ವಾಮಿ ದೇವರಿಗೆ ಹೂಗಳು ಮತ್ತು ಆಭರಣಗಳಿಂದ ವಿಶೇಷ ಅಲಂಕಾರ ಮಾಡಲಾಗಿದ್ದು, ಯೋಗನರಸಿಂಹ ಭಕ್ತವರಪ್ರದನಾಗಿ ಕಂಗೊಳಿಸುತ್ತಿದ್ದಾನೆ.

ಈ ಬಾರಿ 50ಮಂದಿ ಬಾಣಸಿಗರು ಲಡ್ಡು ತಯಾರಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು. 1500ಗ್ರಾಂ ತೂಕದ ಐದು ಸಾವಿರ ಹಾಗೂ 100ಗ್ರಾಂ ತೂಕದ ಎರಡು ಲಕ್ಷ ಲಡ್ಡುಗಳನ್ನು ತಯಾರಿಸಲಾಗಿದೆ. ಲಡ್ಡು ತಯಾರಿಸಲು 50ಕ್ವಿಂಟಾಲ್ ಕಡಲೆ ಹಿಟ್ಟು, 100ಕ್ವಿಂಟಾಲ್ ಸಕ್ಕರೆ, ಐದು ಸಾವಿರ ಖಾದ್ಯ ತೈಲ, 100ಕೆ.ಜಿ,ಗೋಡಂಬಿ, 50ಕೆ.ಜಿ.ಒಣದ್ರಾಕ್ಷಿ, 50ಕೆ.ಜಿ.ಬಾದಾಮಿ, 50ಕೆ.ಜಿ.ಡೈಮಂಡ್ ಸಕ್ಕರೆ, 500ಕೆಜಿ ಬೂರಾ ಸಕ್ಕರೆ, 10ಕೆಜಿ ಪಿಸ್ತಾ, 20ಕೆ.ಜಿ.ಏಲಕ್ಕಿ, 20ಕೆ.ಜಿ.ಜಾಕಾಯಿ ಮತ್ತು ಜಾಪತ್ರೆ, 5ಕೆಜಿ ಪಚ್ಚೆ ಕರ್ಪೂರ, 50ಕೆ.ಜಿ.ಲವಂಗ ಬಳಸಲಾಗಿದೆ

ಹೊಸ ವರ್ಷ ಪ್ರಯುಕ್ತ ಈ ಬಾರಿ ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ ಎರಡು ಲಕ್ಷ ಲಡ್ಡುಗಳನ್ನು ತಯಾರಿಸಲಾಗಿದೆ. ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ತೆರಳುತ್ತಿರುವುದು ಕಂಡು ಬಂತು.  ರಾತ್ರಿ 12ರವರೆಗೂ ಶ್ರೀದೇವರ ದರ್ಶನವಿದ್ದು, ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: