ಮೈಸೂರು

ಪ್ರಸಿದ್ಧ ಭಾಷಾ ವಿಜ್ಞಾನಿ ಡಾ.ಕಿಕ್ಕೇರಿ ನಾರಾಯಣ ಇನ್ನಿಲ್ಲ

ನಾಡಿನ ಪ್ರಸಿದ್ಧ ಭಾಷಾವಿಜ್ಞಾನಿ ಡಾ.ಕಿಕ್ಕೇರಿ ನಾರಾಯಣ ಅವರು ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ.

ಮೃತರು ಪತ್ನಿ ಗಿರಿಜಾ, ಮಕ್ಕಳಾದ ಚೇತನ್ ಮತ್ತು ಹರ್ಷ ಅವರನ್ನು ಅಗಲಿದ್ದಾರೆ. ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಡಾ. ನಾರಾಯಣ ಜನಿಸಿದ್ದರು. ನಾರಾಯಣ ಅವರು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ದೀರ್ಘಕಾಲ ಸಂಶೋಧನೆಯ ಸೇವೆಯಲ್ಲಿದ್ದರು.  ಸಾಹಿತ್ಯ ಕೃತಿಗಳ ರಾಚನಿಕ ಮತ್ತು ರಾಚನಿಕೋತ್ತರ ಅಧ್ಯಯನವನ್ನು ಮಾಡಿದ್ದರು. ಅವರ ಭಾಷಾವಿಜ್ಞಾನ ಮತ್ತು ಜಾನಪದ ವಿದ್ವತ್ತನ್ನು ವಿದೇಶಗಳ ವಿಶ್ವವಿದ್ಯಾನಿಲಯಗಳು ಗೌರವಿಸಿವೆ.
ಅವರು ಜೇನು ಕುರುಬರ ಕನ್ನಡವನ್ನು ಅಧ್ಯಯನ ಮಾಡಿ ಅದರ ನಿಘಂಟು ಮತ್ತು ಆ ಭಾಷೆಯಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದ್ದರು. 11ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ  “ಬಿದಿರು ಮಂಡಲ” ನಾಟಕ ತುಂಬ ಜನಪ್ರಿಯತೆಯನ್ನು ಪಡೆದಿದೆ. ಅದರಲ್ಲಿ ಜೇನು ಕುರುಬ ಯುವಕರೇ ಅಭಿನಯಿಸಿರುವುದು ವಿಶೇಷ.
ಪದವಿ ತರಗತಿಯಲ್ಲಿರುವಾಗಲೇ ಸಹಪಾಠಿ ವಿ.ಎನ್. ಲಕ್ಷ್ಮೀನಾರಾಯಣರ ಜೊತೆಗೂಡಿ ಕ್ಷೇತ್ರಕಾರ್ಯ ಮಾಡಿ “ತುಂಬೆ ಹೂವಿಟ್ಟು ಶರಣೆನ್ನಿ” ಎಂಬ ಜನಪದ ಗೀತೆಗಳ ಸಂಕಲನವನ್ನು ಸಂಪಾದಿಸಿ ಪ್ರಕಟಿಸಿದ್ದರು.

ಮೈಸೂರಿನ ವೈಚಾರಿಕ ಲೋಕದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ನಾರಾಯಣ ಅವರು ಕೆಲ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ನಿಧನದಿಂದ ಮೈಸೂರಿನ ವಿದ್ವತ್ತಿನ ಲೋಕ ಬಡವಾಗಿದೆ. ಬುಧವಾರ(ಇಂದು)ಅಂತ್ಯಕ್ರಿಯೆ ನಡೆಯಲಿದೆ.

Leave a Reply

comments

Related Articles

error: