ಕರ್ನಾಟಕಪ್ರಮುಖ ಸುದ್ದಿ

ಹಾಸನದಿಂದ ಪ್ರಜ್ವಲ್ ರೇವಣ್ಣ, ಬೆಂಗಳೂರಿನಿಂದ ದೇವೇಗೌಡರು ಕಣಕ್ಕೆ!

ಬೆಂಗಳೂರು (ಜ.1): ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಖಚಿತವಾಗಿದೆ. ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟು ಕೊಡುವುದಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಬಾರಿ ಹಾಸನ ಕ್ಷೇತ್ರದಿಂದ ಕಣಕ್ಕಿಳಿಯುತ್ತಿಲ್ಲ. ಮೈಸೂರು-ಕೊಡಗು, ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ದೇವೇಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದರು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ. ಒಂದು ವೇಳೆ ಎಚ್.ಡಿ.ದೇವೇಗೌಡರು ಈ ಕ್ಷೇತ್ರದಿಂದ ಕಣಕ್ಕಿಳಿದರೆ ಸದಾನಂದ ಗೌಡರಿಗೆ ಪ್ರಬಲ ಪೈಪೋಟಿ ಎದುರಾಗಲಿದೆ. ಇಬ್ಬರು ಒಕ್ಕಲಿಗ ನಾಯಕರಲ್ಲಿ ಗೆಲುವು ಯಾರಿಗೆ? ಎಂದು ಕಾದು ನೋಡಬೇಕಿದೆ.

ಬೆಂಗಳೂರಿನಲ್ಲಿ ಮಾತನಾಡಿದ ಎಚ್.ಡಿ.ದೇವೇಗೌಡರು, ‘ಹಾಸನ ಕ್ಷೇತ್ರದಲ್ಲಿ ಈ ಬಾರಿ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯಲಿದ್ದಾರೆ. ಪಕ್ಷ ಸಂಘಟನೆ ಕೆಲಸವನ್ನು ಉತ್ತಮವಾಗಿ ಮಾಡುತ್ತಿರುವ ಪ್ರಜ್ವಲ್ ರೇವಣ್ಣ ಅವರಿಗೆ ಹಾಸನ ಲೋಕಸಭಾ ಕ್ಷೇತ್ರ ಬಿಟ್ಟುಕೊಡುತ್ತೇನೆ. ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದರ ಕುರಿತು ಇನ್ನೂ ನಿರ್ಧಾರ ಮಾಡಿಲ್ಲ’ ಎಂದು ಹೇಳಿದ್ದಾರೆ.

ಎಚ್.ಡಿ.ದೇವೇಗೌಡರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಬೆಂಗಳೂರು ರಾಜಕೀಯಕ್ಕೆ ಬರಲು ದೇವೇಗೌಡರು ಯೋಜನೆ ರೂಪಿಸುತ್ತಿದ್ದಾರೆ. ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳುವ ಸಮಯದಲ್ಲಿಯೇ ಬೆಂಗಳೂರು ಉತ್ತರಕ್ಕಾಗಿ ಅವರು ಬೇಡಿಕೆ ಮುಂದಿಡಬಹುದು ಎಂಬ ನಿರೀಕ್ಷೆ ಇದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 20 ಲಕ್ಷ ಮತದಾರರಿದ್ದಾರೆ. ಇವರಲ್ಲಿ ಸುಮಾರು 7 ಲಕ್ಷ ಒಕ್ಕಲಿಗರಿದ್ದಾರೆ, 7 ಲಕ್ಷ ಒಬಿಸಿ ಮತಗಳಿವೆ. ಆದ್ದರಿಂದ, ದೇವೇಗೌಡರು ಬೆಂಗಳೂರು ನಗರದ ಮೇಲೆ ಕಣ್ಣಿಟ್ಟಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂಬುದು ಜೆಡಿಎಸ್ ಗುರಿ. ಮಂಡ್ಯ ಮತ್ತು ಹಾಸನ ಜೆಡಿಎಸ್ ಭದ್ರಕೋಟೆಯಾಗಿದ್ದು, ಜೆಡಿಎಸ್‌ ಅಭ್ಯರ್ಥಿಗಳು ಜಯಗಳಿಸುವುದು ಖಚಿತವಾಗಿದೆ. ಬೆಂಗಳೂರಿನಿಂದ ಸ್ಪರ್ಧೆ ಮಾಡಿದರೆ ಮತ್ತೊಂದು ಕ್ಷೇತ್ರವನ್ನು ವಶಕ್ಕೆ ಪಡೆದುಕೊಳ್ಳಬಹುದು ಎಂಬುದು ಗೌಡರ ಲೆಕ್ಕಾಚಾರವಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದರು ಡಿ.ವಿ.ಸದಾನಂದ ಗೌಡ. ಎಚ್.ಡಿ.ದೇವೇಗೌಡರು ಕ್ಷೇತ್ರದಿಂದ ಕಣಕ್ಕಿಳಿದರೆ ಇಬ್ಬರು ಒಕ್ಕಲಿಗರ ನಾಯಕರ ನಡುವೆ ಪೈಪೋಟಿ ನಡೆಯಲಿದೆ. 2014ರ ಚುನಾವಣೆಯಲ್ಲಿ ಡಿ.ವಿ.ಸದಾನಂದ ಗೌಡ ಅವರು 718326 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡರೆ 12 ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂದು ಪಕ್ಷ ಈಗಾಗಲೇ ಹೇಳಿದೆ. ಸೀಟು ಹಂಚಿಕೆ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. (ಎನ್.ಬಿ)

Leave a Reply

comments

Related Articles

error: