ಮೈಸೂರು

ಸ್ವಚ್ಛ ನಗರಿ ಪಟ್ಟ ಗಿಟ್ಟಿಸಲು ಮತ್ತೆ ಸಜ್ಜಾಗುತ್ತಿದೆ ಮೈಸೂರು : ನಾಳೆಯಿಂದ ದೇಶಾದ್ಯಂತ ಸ್ವಚ್ಛತಾ ಸಮೀಕ್ಷೆ

ಮೈಸೂರು,ಜ.3:- ಈಗಾಗಲೇ ಸ್ವಚ್ಛ ನಗರಿ ಎಂಬ ಪಟ್ಟವನ್ನು ತನ್ನದಾಗಿಸಿಕೊಂಡಿದ್ದ ಮೈಸೂರು ಮತ್ತೊಮ್ಮೆ ಈ ಸ್ಪರ್ಧೆಗೆ ಸಜ್ಜಾಗುತ್ತಿದೆ. ಸ್ವಚ್ಛ ನಗರಿ ಸ್ಥಾನ ನಿರ್ಧರಿಸಲು ಕೈಗೊಳ್ಳುವ ಸ್ವಚ್ಛತಾ ಸಮೀಕ್ಷೆ (ಸ್ವಚ್ಛ ಸರ್ವೇಕ್ಷಣ-2019) ದೇಶದಾದ್ಯಂತ ಜನವರಿ 4ರಿಂದ 31ರವರೆಗೆ ನಡೆಯಲಿದೆ.

ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಈ ಬಾರಿ ಸ್ಪರ್ಧೆಯ ಪಾಯಿಂಟ್‌ಗಳು ಮತ್ತು ಮಾನದಂಡದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದೆ. ಕಳೆದ ಸಲ ಒಟ್ಟು 4,000 ಅಂಕಗಳನ್ನು ನಿಗದಿಪಡಿಸಿ, ಅತಿಹೆಚ್ಚು ಅಂಕಗಳನ್ನು ಪಡೆದ ನಗರಗಳನ್ನು ಆಧರಿಸಿ ರ್ಯಾಂಕ್ ಪಟ್ಟಿ ಪ್ರಕಟಿಸಿತ್ತು. ಈ ಬಾರಿ ಒಟ್ಟು 5,000 ಅಂಕಗಳನ್ನು ನಿಗದಿಪಡಿಸಲಾಗಿದೆ. ಸಮೀಕ್ಷಾ ತಂಡ ಈ ಹಿಂದಿನ ವರ್ಷಗಳಲ್ಲಿ ಮೂರು ಹಂತಗಳಲ್ಲಿ ಸಮೀಕ್ಷೆ ನಡೆಸಿ ಅಂಕಗಳನ್ನು ನೀಡುತ್ತಿದ್ದರೆ, ಈ ಬಾರಿ ನಾಲ್ಕು ಹಂತಗಳಲ್ಲಿ ಸಮೀಕ್ಷೆ ನಡೆಯಲಿದೆ.

ಮೊದಲ ಹಂತದಲ್ಲಿ ಸಮೀಕ್ಷಾ ತಂಡವು ಪಾಲಿಕೆಯಿಂದ ಸ್ವಚ್ಛತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಿದೆ. ಎರಡನೇ ಹಂತದಲ್ಲಿ ಪ್ರಮುಖ ಸ್ಥಳಗಳಲ್ಲಿ ಕಸ ನಿರ್ವಹಣೆ ರೀತಿ, ಪೌರಕಾರ್ಮಿಕರ ಕಾರ್ಯನಿರ್ವಹಣೆ ಕುರಿತು ಮಾಹಿತಿ ಕಲೆ ಹಾಕಲಿದೆ.

ಜನರನ್ನು ಭೇಟಿಯಾಗಿ ಮಾಹಿತಿ ಪಡೆಯುತ್ತದೆ. ಈ ಬಾರಿ ಇವುಗಳ ಜತೆಗೆ ‘ಸರ್ಟಿಫಿಕೇಶನ್’ ಎಂಬ ಹೊಸ ವಿಭಾಗವನ್ನು ಸೇರಿಸಲಾಗಿದೆ. ಪ್ರತಿ ನಾಲ್ಕು ವಿಭಾಗಗಳಿಗೆ ತಲಾ 1,250 ಅಂಕಗಳನ್ನು ನಿಗದಿಪಡಿಸಲಾಗಿದೆ.

1000 ಅಂಕಗಳು ಸರ್ಟಿಫಿಕೇಶನ್ ವಿಭಾಗದಲ್ಲಿ ಬಯಲು ಶೌಚ ಮುಕ್ತ ನಗರ ಮತ್ತು ಘನತ್ಯಾಜ್ಯ ನಿರ್ವಹಣೆ ಎಂಬ ಎರಡು ಉಪವಿಭಾಗಗಳನ್ನು ಮಾಡಲಾಗಿದೆ. ನಗರವು ಬಯಲು ಶೌಚ ಮುಕ್ತ ಎಂದು ಘೋಷಣೆಯಾಗಿದ್ದರೆ ಪೂರ್ಣ ಅಂಕ ಲಭಿಸಲಿದೆ. ಘನತ್ಯಾಜ್ಯ ಸಂಗ್ರಹ, ತ್ಯಾಜ್ಯ ವಿಲೇವಾರಿಗೆ ಮಾಡಿರುವ ಕ್ರಮಗಳನ್ನು ಆಧರಿಸಿ ‘ಸ್ಟಾರ್‌’ ನೀಡಲಾಗುತ್ತದೆ. ಸಮೀಕ್ಷಾ ತಂಡವು ಒಂದರಿಂದ ಏಳರವರೆಗೆ ‘ಸ್ಟಾರ್‌’ಗಳನ್ನು ನೀಡುತ್ತದೆ. ಸೆವೆನ್ ಸ್ಟಾರ್‌ ಪಡೆಯುವ ನಗರಕ್ಕೆ 1000 ಅಂಕಗಳು ಲಭಿಸುತ್ತವೆ.

ಬಯಲು ಶೌಚ ಮುಕ್ತ ನಗರ ಸ್ವಚ್ಛ ಸರ್ವೇಕ್ಷಣ್ ಅಂಕಗಳು ಮತ್ತು ಮಾನದಂಡದಲ್ಲಿ ಬದಲಾವಣೆಯಾಗಿರುವುದು ನಮ್ಮ ಮೇಲೆ ಹೆಚ್ಚಿನ ಪರಿಣಾಮ ಬೀರದು. ಸ್ವಚ್ಛನಗರಿ ಪಟ್ಟವನ್ನು ಮತ್ತೆ ಪಡೆಯುವ ನಿಟ್ಟಿನಲ್ಲಿ ಎಲ್ಲ ತಯಾರಿ ನಡೆಸಲಾಗಿದೆ. ಈ ಬಾರಿ ಹೊಸದಾಗಿ ‘ಸರ್ಟಿಫಿಕೇಶನ್’ ವಿಭಾಗ ಸೇರಿಸಲಾಗಿದೆ. ಮೈಸೂರು ನಗರವು ಬಯಲು ಶೌಚ ಮುಕ್ತ ನಗರ ಎಂದು ಈಗಾಗಲೇ ಘೋಷಣೆಯಾಗಿರುವುದರಿಂದ ಅಂಕಗಳಿಗೆ ಯಾವುದೇ ತೊಂದರೆಯಾಗದು ಎನ್ನುವುದು ಪಾಲಿಕೆ ಅಧಿಕಾರಿಗಳ ಅಭಿಪ್ರಾಯ.

ಏತನ್ಮಧ್ಯೆ ಕಸಗಳು ಸರಿಯಾಗಿ ವಿಲೇವಾರಿಯಾಗದೇ ರಾಶಿ ರಾಶಿ ಬಿದ್ದಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಫೋನ್ ಇನ್ ಕಾರ್ಯಕ್ರಮದಲ್ಲಿ ಹಲವರು ದೂರಿಕೊಂಡಿದ್ದಾರೆ. ಇವೆಲ್ಲದರ ನಡುವೆ ಪಾಲಿಕೆ ಮತ್ತೆ ಸ್ವಚ್ಛ ನಗರಿ ಪಟ್ಟವನ್ನು ಅಲಂಕರಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: