ಮೈಸೂರು

ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಅನಧಿಕೃತ ಪ್ರವೇಶ : ಪ್ರತಿಭಟನೆ

ಮೈಸೂರು,ಜ.3:- ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ  ಮಹಿಳೆಯರು ಅನಧಿಕೃತವಾಗಿ  ಪ್ರವೇಶ ಮಾಡಿರುವುದರ ವಿರುದ್ಧ  ಶ್ರೀಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿವತಿಯಿಂದ ಇಂದು ಗಾಂಧಿ ಚೌಕದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ಪ್ರತಿಭಟನಾಕಾರರು ಮಾತನಾಡಿ ಕೋಟ್ಯಂತರ ಅಯ್ಯಪ್ಪ ಭಕ್ತರಿಗೆ ಜ.2ಕರಾಳ ದಿನ. ಕೇರಳದ ಕಮ್ಯುನಿಸ್ಟ್ ಸರ್ಕಾರ ಇಬ್ಬರು ನಾಸ್ತಿಕ ಮಹಿಳೆಯರನ್ನು ಪೊಲೀಸರ ಸಹಾಯದಿಂದ ಹಿಂಬಾಗಿಲಿನ ಮೂಲಕ ದೇವಾಲಯದ ಪ್ರವೇಶವನ್ನು ಮಾಡಿಸಿ ನೂರಾರು ವರ್ಷಗಳಿಂದ ಶಬರಿಮಲೆ ಕ್ಷೇತ್ರದಲ್ಲಿ ನಡೆದುಕೊಂಡು ಬಂದಿದ್ದ ಸಂಪ್ರದಾಯವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬಂದಿದ್ದ ಪದ್ಧತಿಯನ್ನು ನಾಶ ಮಾಡುವುದರ ಮೂಲಕ ಕೋಟ್ಯಾಂತರ ಆಸ್ತಿಕರಿಗೆ ವಿಶೇಷವಾಗಿ ಅಯ್ಯಪ್ಪ ಭಕ್ತರಿಗೆ ಆಘಾತವನ್ನು, ನೋವನ್ನುಂಟು ಮಾಡಿದೆ.  ಕೇರಳ ರಾಜ್ಯದ ಕಮ್ಯುನಿಸ್ಟ್ ಮುಖ್ಯಮಂತ್ರಿ ಕೋಟ್ಯಂತರ ಅಯ್ಯಪ್ಪ ಭಕ್ತರ ನಂಬಿಕೆಯನ್ನುಅಪಮಾನಿಸಲು ಕ್ಷೇತ್ರದ ಪಾವಿತ್ರ್ಯತೆಯನ್ನು ಹಾಳುಗೆಡವಲು ಉದ್ದೇಶಪೂರ್ವಕವಾಗಿ ಕೆಲವು ಪೊಲೀಸ್ ಅಧಿಕಾರಿಗಳ ಮೂಲಕ ಇಬ್ಬರು ಮಹಿಳೆಯರನ್ನು ಪ್ರವೇಶ ಮಾಡಿಸಿದರು.

ಸರ್ವೋಚ್ಛ ನ್ಯಾಯಾಲಯದಲ್ಲಿ ಜನವರಿ 22ರಂದು ರಿವ್ಯೂ ಪಿಟಿಶನ್ ನ ವಿಚಾರಣೆಗೆ ಬರುವುದಿದ್ದರೂ ನ್ಯಾಯಾಲಯದ ಆದೇಶವನ್ನು ಪಾಲಿಸುವ ನೆಪದಲ್ಲಿ ಹಿಂದುಗಳ ನಂಬಿಕೆಯ ಜೊತೆಗೆ ಪಿಣರಾಯಿ ಸರಕಾರ ಚೆಲ್ಲಾಟವಾಡಿದೆ. ನ್ಯಾಯಾಲಯದ ಆದೇಶದ ನಂತರ ಕೇರಳದಲ್ಲಿ ಹಾಗೂ ದೇಶದಲ್ಲಿ ಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸಲು ಲಕ್ಷಾಂತರ ಅಯ್ಯಪ್ಪ ಭಕ್ತರು ವಿಶೇಷವಾಗಿ ಮಹಿಳೆಯರು ರಸ್ತೆಗಿಳಿದು ನಿರ್ದಿಷ್ಟ ವಯಸ್ಸಿನ ಮಹಿಳೆಯರ ಪ್ರವೇಶದ ವಿರುದ್ಧ ಧ್ವನಿಯೆತ್ತಿದ್ದಾರೆ. ಪ್ರಜಾಪ್ರಭುತ್ವದ ಆಧಾರದಲ್ಲಿ ರಚಿತವಾದ ಸರ್ಕಾರ ಎಲ್ಲಾ ವರ್ಗದ ಜನರ ಭಾವನೆಗಳಿಗೆ ಬೆಲೆಯನ್ನು ಕೊಟ್ಟು ಅಧಿಕಾರವನ್ನು ನಿರ್ವಹಿಸಬೇಕಿತ್ತು. ಆದರೆ ಜನರಿಂದ ಆಯ್ಕೆಯಾದ ಸರ್ಕಾರ ಶಬರಿಮಲೆ ಕ್ಷೇತ್ರದ ಪಾವಿತ್ರ್ಯತೆಯನ್ನು ಬಲಿಗೊಡಲು ಬಹಳ ವ್ಯವಸ್ಥಿತವಾಗಿ ಸಂಚುರೂಪಿಸಿ ಇಬ್ಬರು ಮಹಿಳೆಯರಿಗೆ ರಕ್ಷಣೆಯನ್ನು ನೀಡಿ ದೇವಾಲಯವನ್ನು ಪ್ರವೇಶಿಸಿರುವ ಕ್ರಮ ಅತ್ಯಂತ ಹೇಯ. ಅಹನೀಯ. ಮುಂದಿನ ದಿನಗಳಲ್ಲಿ ನಮ್ಮ ಧರ್ಮ, ಸಂಸ್ಕೃತಿ, ನಂಬಿಕೆಗಳನ್ನು ಉಳಿಸಲು ಹೋರಾಟದ ಅಗತ್ಯವಿದೆ ಎಂದರು.

ಪ್ರತಿಭಟನೆಯಲ್ಲಿ ಶಬರಿ ಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ಸಂಚಾಲಕ ಚೇತನ್ ಮಂಜುನಾಥ್, ಗಿರಿಧರ್, ಗೋಕುಲ್ ಗೋವರ್ಧನ್, ಸವಿತಾ ಪಡ್ಕೇ, ಸೇರಿದಂತೆ ಹಲವರು  ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: