ಕರ್ನಾಟಕಪ್ರಮುಖ ಸುದ್ದಿ

ಫೆ.9ರಿಂದ ಧರ್ಮಸ್ಥಳ ಬಾಹುಬಲಿಗೆ ಮಹಾಮಸ್ತಕಾಭಿಷೇಕ

ಮಂಗಳೂರು (ಜ.3): ಧರ್ಮಸ್ಥಳದ ರತ್ನಗಿರಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ತ್ಯಾಗ, ಮೋಕ್ಷದ ಸಾಕಾರ ಮೂರ್ತಿ ಬಾಹುಬಲಿಗೆ ನಾಲ್ಕನೇ ಮಹಾಮಸ್ತಕಾಭಿಷೇಕದ ಸಂಭ್ರಮಕ್ಕೆ ಸಿದ್ಧತೆ ಆರಂಭಗೊಂಡಿದೆ. ಫೆಬ್ರವರಿ 9 ರಿಂದ 18 ರವರೆಗೆ ಜೈನ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಈ ಮಸ್ತಾಭಿಷೇಕ ನಡೆಯಲಿದ್ದು, ದೇಶ-ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಸಂಭ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗವಹಿಸಲಿದ್ದಾರೆ.

39 ಅಡಿ ಎತ್ತರದ ವಿರಾಟ್ ಮೂರ್ತಿಯನ್ನು ಧರ್ಮಸ್ಥಳದ ಹೆಗಡೆ ಕುಟುಂಬ 1975 ರಲ್ಲಿ ಪ್ರತಿಷ್ಠಾಪಿಸಿತ್ತು. 1982 ರಲ್ಲಿ ಈ ವಿರಾಟ್ ಮೂರ್ತಿಗೆ ಪ್ರಥಮ ಮಹಾಮಸ್ತಕಾಭಿಷೇಕ ನಡೆದಿದ್ದು, 1995 ರಲ್ಲಿ ದ್ವಿತೀಯ ಹಾಗೂ 2007 ರಲ್ಲಿ ತೃತೀಯ ಮಹಾಮಸ್ತಕಾಭಿಷೇಕ ನಡೆದಿದೆ.

12 ವರ್ಷಗಳಿಗೊಮ್ಮೆ ಈ ಮಹಾಮಸ್ತಕಾಭಿಷೇಕ ನಡೆಯುತ್ತಿದ್ದು, 2019ರ ಫೆಬ್ರವರಿ 9 ರಿಂದ 18 ರ ವರೆಗೆ ಚತುರ್ಥ ಮಸ್ತಕಾಭಿಷೇಕ ನಡೆಯಲಿದೆ. 108 ಆಚಾರ್ಯ ವರ್ಧಮಾನ ಸಾಗರ್ ಜೀ ಮಹಾರಾಜ್ ಮತ್ತು 108 ಆಚಾರ್ಯ ಪುಷ್ಪದಂತ ಸಾಗರ್ ಜೀ ಮಹಾರಾಜ್ , ಶ್ರವಣ ಬೆಳಗೊಳದ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾಕರ ಮಹಾಸ್ವಾಮಿ, ಕಾರ್ಕಳ ದಾನಶಾಲಾ ಮಠದ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ನೇತೃತ್ವದಲ್ಲಿ ಸುಮಾರು 300 ಕ್ಕೂ ಮಿಕ್ಕಿದ ಮುನಿಯವರು ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇದೇ ಸಂದರ್ಭದಲ್ಲಿ ಬಾಹುಬಲಿಯ ಬದುಕಿನ ಘಟ್ಟಗಳ ಕುರಿತ ಘಟನಾವಳಿಗಳ ರೂಪಕವನ್ನೂ ಮಸ್ತಕಾಭಿಷೇಕದ ಅಂಗವಾಗಿ ಹಮ್ಮಿಕೊಳ್ಳಲಾಗಿದೆ.

ಕಲಶಾಭಿಷೇಕಕ್ಕೆ ಅನುಕೂಲವಾಗುವಂತಹ ಅಟ್ಟಣಿಗೆಯ ನಿರ್ಮಾಣ ಕಾಮಗಾರಿಯೂ ಆರಂಭಗೊಂಡಿದೆ. ಮಹಾಮಸ್ತಕಾಭಿಷೇಕದ ವೈಭವವನ್ನು ಎಲ್ಲಾ ಭಕ್ತರೂ ನೋಡುವ ಉದ್ಧೇಶದಿಂದ ಭಕ್ತಾಧಿಗಳು ಕುಳಿತುಕೊಳ್ಳಲು ಗ್ಯಾಲರಿಗಳ ನಿರ್ಮಾಣ ಕಾರ್ಯವೂ ಪ್ರಾರಂಭವಾಗಿದ್ದು, ಭಕ್ತಾಧಿಗಳು ಈ ವೈಭವವನ್ನು ಕಣ್ತುಂಬುವ ತವಕದಲ್ಲಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಕೇಂದ್ರದ ಸಚಿವರು ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. (ಎನ್.ಬಿ)

Leave a Reply

comments

Related Articles

error: