ಕರ್ನಾಟಕಪ್ರಮುಖ ಸುದ್ದಿ

ಐಟಿ ದಾಳಿ: ಯಶ್ ಮಾವನನ್ನು ಕರೆದೊಯ್ದ ಅಧಿಕಾರಿಗಳು; ಕಾನೂನಿಗೆ ತಲೆಬಾಗಬೇಕೆಂದ ಯಶ್

ಬೆಂಗಳೂರು,ಜ.3-ಸ್ಯಾಂಡಲ್ ವುಡ್ ನಿರ್ಮಾಪಕರು, ನಟರ ಮನೆ, ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.

ಮುಂಬೈಯಲ್ಲಿದ್ದ ಯಶ್‌ ಅವರು ಐಟಿ ದಾಳಿ ವಿಷಯ ತಿಳಿದ ಬಳಿಕ ಬೆಂಗಳೂರಿಗೆ ವಾಪಾಸಾಗಿದ್ದಾರೆ. ಸಂಜೆ 4 ಗಂಟೆಯ ವೇಳೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಯಶ್, ನಾವು ಪ್ರಜೆಗಳಾಗಿ ಕಾನೂನಿಗೆ ತಲೆ ಬಾಗಬೇಕು. ನನಗೆ ದಾಳಿ ಬಗ್ಗೆ ವಿಷಯ ತಿಳಿದ ಕೂಡಲೇ ಇಲ್ಲಿಗೆ ಆಗಮಿಸಿದ್ದೇನೆ. ಮನೆಯವರ ಜತೆ ಸಂಪರ್ಕ ಸಾಧ್ಯವಾಗಿಲ್ಲ. ಇದು ಕೆಜಿಎಫ್ ಚಿತ್ರದ ಯಶಸ್ಸಿನ ಕಾರಣಕ್ಕೆ ಆಗಿದೆ ಎಂಬುದರ ಬಗ್ಗೆ ಏನು ಹೇಳಲಾರೆ. ಸುಮ್ಮನೆ ನಾವು ಊಹೆ ಮಾಡಿಕೊಂಡು ಹೇಳಿಕೆ ನೀಡುವುದರಲ್ಲಿ ಅರ್ಥವಿಲ್ಲ. ನಾನು ಮನೆಗೆ ಹೋಗುತ್ತಿದ್ದೇನೆ. ನಂತರ ಈ ಬಗ್ಗೆ ತಿಳಿಯಲಿದೆ ಎಂದರು.

ಯಶ್ ಅವರ ಮನೆ ಮೇಲೆ ದಾಳಿ ನಡೆಸಿದ ಬಳಿಕ ಐಟಿ ಅಧಿಕಾರಿಗಳು ಗಾಯತ್ರಿ ನಗರದಲ್ಲಿರುವ ರಾಧಿಕಾ ಪಂಡಿತ್‌  ನಿವಾಸದ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಮಧ್ಯಾಹ್ನ ರಾಧಿಕಾ ನಿವಾಸಕ್ಕೆ ಆಗಮಿಸಿದ ಅಧಿಕಾರಿಗಳು ರಾಧಿಕಾ ತಂದೆಯನ್ನು ಇನ್ನೋವಾ ಕಾರಿನಲ್ಲಿ ಕರೆದೊಯ್ದಿದ್ದಾರೆ. ಯಾಕೆ ಕರೆದೊಯ್ದಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

ಕತ್ರಿಗುಪ್ಪೆಯಲ್ಲಿರುವ ಯಶ್‌ ನಿವಾಸದ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹೊಸಕೆರೆ ಹಳ್ಳಿ ಯಲ್ಲಿರುವ ಯಶ್‌ ಅವರ ಕಚೇರಿಯ ಮೇಲೂ ದಾಳಿ ನಡೆಸಿದ್ದಾರೆ.

ಖ್ಯಾತ ನಟ ಶಿವರಾಜ್‌ ಕುಮಾರ್‌, ನಟ ಪುನೀತ್‌ ರಾಜ್‌ಕುಮಾರ್‌,ಕಿಚ್ಚ ಸುದೀಪ್‌, ಯಶ್‌, ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್‌, ಜಯಣ್ಣ, ಎಂಎಲ್‌ಸಿ ಸಿ.ಆರ್‌ ಮನೋಹರ್‌, ಕೆಜಿಎಫ್ ಖ್ಯಾತಿಯ ವಿಜಯ್‌ ಕಿರಗಂದೂರು ಸೇರಿ ದಿಗ್ಗಜರ ನಿವಾಸಗಳ ಮೇಲೆ ದಾಳಿ ನಡೆದಿದೆ. (ಎಂ.ಎನ್)

 

Leave a Reply

comments

Related Articles

error: