ದೇಶ

ಯೋಧರಿಗೆ ಕಳಪೆ ಆಹಾರ ಪ್ರಕರಣ; ಸಂಪರ್ಕಕ್ಕೆ ಸಿಗದ ಯಾದವ್, ಆತಂಕದಲ್ಲಿ ಕುಟುಂಬ

ನವದೆಹಲಿ: ಗಡಿ ಭದ್ರತಾ ಪಡೆಯ ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿತ್ತು ಎಂದು ತೇಜ್ ಬಹದ್ದೂರ್ ಯಾದವ್ ಮಾಡಿರುವ ಆರೋಪವನ್ನು ಸತ್ಯವೆಂದು ಅವರ ಕುಟುಂಬದವರು ಪ್ರತಿಪಾದಿಸಿದ್ದಾರೆ. ಯಾದವ್ ಹೇಳಿರುವುದು ಸತ್ಯ ಸಂಗತಿ. ಎಲ್ಲ ಯೋಧರಿಗೂ ಉತ್ತಮ ಆಹಾರ ಸಿಗಬೇಕು ಅನ್ನುವ ದೃಷ್ಟಿಯಿಂದ ಯಾದವ್ ಭ್ರಷ್ಟ ಅಧಿಕಾರಿಗಳ ಬಣ್ಣ ಬಯಲು ಮಾಡಹೊರಟಿದ್ದಾರೆ ಎಂದು ಹೇಳಿದ್ದಾರೆ.

ತೇಜ್ ಬಹದ್ದೂರ್ ಅವರ ಪತ್ನಿ ಶರ್ಮಿಳಾ ತನ್ನ ಪತಿಯ ಮೇಲಧಿಕಾರಿಗಳು ಮಾಡಿರುವ ಆರೋಪಗಳನ್ನು ತಳ್ಳಿಹಾಕಿದ್ದು, ಅವರ ಮಾನಸಿಕ ಸ್ಥಿತಿ ಸರಿಯಿರಲಿಲ್ಲ ಎಂದ ಮೇಲೆ ಅವರನ್ನು ಯಾಕೆ ಗಡಿ ಪ್ರದೇಶದಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದೀರಿ ಎಂದು ಗಡಿ ಭದ್ರತಾ ಪಡೆ ಅಧಿಕಾರಿಗಳಿಗೆ ಸವಾಲೆಸೆದಿದ್ದಾರೆ.

ಯೋಧರ ಯೋಗಕ್ಷೇಮದ ದೃಷ್ಟಿಯಿಂದ ನನ್ನ ಪತಿ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ. ಉತ್ತಮ ಆಹಾರ ಕೊಡಿ ಎಂದು ಕೇಳುವುದು ತಪ್ಪಲ್ಲ. ಆದರೆ, ಕೆಲವರು ಅವರ ಮಾನಸಿಕ ಆರೋಗ್ಯ ಸರಿಯಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅವರ ಆರೋಗ್ಯ ಸರಿಯಿರಲಿಲ್ಲ ಎಂದ ಮೇಲೆ ಗಡಿ ಪ್ರದೇಶಕ್ಕೆ ಹೇಗೆ ಕಳುಹಿಸಿದರು? ಕೇಂದ್ರ ಸರಕಾರ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.

ಯಾದವ್ ಅವರ ಮಗ ರೋಹಿತ್ ಕೂಡ ಉತ್ತಮ ಗುಣಮಟ್ಟದ ಆಹಾರಕ್ಕಾಗಿ ತನ್ನ ತಂದೆ ಇಟ್ಟಿರುವ ಬೇಡಿಕೆಯನ್ನು ಬೆಂಬಲಿಸಿ, ತಪ್ಪಿತಸ್ಥರ ವಿರುದ್ಧ ತನಿಖೆಯಾಗಬೇಕು ಆಗ್ರಹಿಸಿದರು. ಒಂದು ದಿನದಿಂದ ತಂದೆಯನ್ನು ಸಂಪರ್ಕಿಸಲು ಯತ್ನಿಸುತ್ತಿದ್ದೇವೆ. ಅವರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರನ್ನು ಯಾವ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ? ಅವರು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಅವರು ಉತ್ತಮ ಆಹಾರವನ್ನಷ್ಟೇ ಕೇಳಿದ್ದು, ಅದರಲ್ಲಿ ಯಾವ ತಪ್ಪೂ ಇಲ್ಲ. ಅವರು ಎಲ್ಲಿದ್ದಾರೆ ಎಂಬುದನ್ನು ನಮಗೆ ತಿಳಿಸಬೇಕು ಎಂದು ರೋಹಿತ್ ಆಗ್ರಹಿಸಿದ್ದಾರೆ.

ಯೋಧರಿಗೆ ಕಳಪೆ ಆಹಾರ ನೀಡುತ್ತಾರೆ ಎಂದು ಆರೋಪಿಸಿದ್ದ ಯಾದವ್ ಅವರ ಹಿಂದಿನ ದಾಖಲೆಗಳು ಸರಿಯಿಲ್ಲ. ಅವರು ಹಲವು ಬಾರಿ ಅಶಿಸ್ತು ತೋರಿದ್ದರು. ನ್ಯಾಯಯುತ ತನಿಖೆಗಾಗಿ ಅವರನ್ನು ಬೇರೆಡೆ ವರ್ಗಾಯಿಸಲಾಗಿದೆ ಎಂದು ಐಜಿ ಉಪಾಧ್ಯಾಯ್ ಮಂಗಳವಾರದಂದು ಹೇಳಿಕೆ ನೀಡಿದ್ದರು.

Leave a Reply

comments

Related Articles

error: