ಪ್ರಮುಖ ಸುದ್ದಿ

ಶಬರಿಮಲೆ ವಿವಾದ : ಮಹಿಳೆಯರ ಪ್ರವೇಶ ಖಂಡಿಸಿ ಮಡಿಕೇರಿಯಲ್ಲಿ ಪ್ರತಿಭಟನೆ

ರಾಜ್ಯ(ಮಡಿಕೇರಿ) ಜ.4 :- ಇಬ್ಬರು ಮಹಿಳೆಯರು ಶಬರಿಮಲೆ ದೇವಾಲಯವನ್ನು ಪ್ರವೇಶಿಸಿರುವುದನ್ನು ಖಂಡಿಸಿ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿಯ ಜಿಲ್ಲಾ ಘಟಕ ಮತ್ತು ನಗರ ಬಿಜೆಪಿಯ ಕಾರ್ಯಕರ್ತರು ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಬೆಳಗ್ಗೆ ಸಮಾವೇಶಗೊಂಡ ಪ್ರತಿಭಟನಾಕಾರರು, ‘ಮಾನವ ಸರಪಳಿ’ ರಚಿಸಿ, ರಸ್ತೆಯಲ್ಲೇ ಕುಳಿತು ಶ್ರೀ ಅಯ್ಯಪ್ಪನ ಶರಣು ಘೋಷಗಳನ್ನು ಕೂಗುವ ಮೂಲಕ ರಸ್ತೆ ತಡೆ ನಡೆಸಿದರು. ಕೇರಳದ ಕಮ್ಯೂನಿಸ್ಟ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಮಹಿಳಾ ಮೋರ್ಚಾದ ನಗರಾಧ್ಯಕ್ಷರಾದ ಅನಿತಾ ಪೂವಯ್ಯ ಮಾತನಾಡಿ, ಶ್ರೀ ಅಯ್ಯಪ್ಪನ ಸನ್ನಿಧಿಯಲ್ಲಿ ಎಂಟು ನೂರು ವರ್ಷಗಳ ಹಿಂದಿನಿಂದಲೂ ಮಹಿಳೆಯರಿಗೆ ಪ್ರವೇಶ ನಿಷೇಧವಿದ್ದರೂ, ದೇವಾಲಯದ ಸಂಪ್ರದಾಯವನ್ನು ಮುರಿದು ಮಹಿಳೆಯರು ಅಯ್ಯಪ್ಪ ದೇವಾಲಯಕ್ಕೆ ಪ್ರವೇಶ  ಮಾಡಿರುವುದು ಖಂಡನೀಯ ಎಂದರು.

ಕೇರಳದ ಕಮ್ಯೂನಿಸ್ಟ್ ಸರ್ಕಾರ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದ ಅನಿತಾ ಪೂವಯ್ಯ, ದೇವಾಲಯಕ್ಕೆ ಪ್ರವೇಶ ಮಾಡುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಿರುವುದನ್ನು ಹಿಂದೂ ಮಹಿಳೆಯರು ಹಾಗೂ ಸಮಾಜ ಖಂಡಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭೆಯ ಮಾಜಿ ಸದಸ್ಯ ಉಮೇಶ್ ಸುಬ್ರಮಣಿ ಮಾತನಾಡಿ, ಶಬರಿಮಲೆಗೆ ಮಹಿಳೆಯರು ಪ್ರವೇಶ ಮಾಡುವುದಕ್ಕೆ ಕೇರಳ ಸರ್ಕಾರ ನೀಡಿದ ಕುಮ್ಮಕ್ಕು ಕಾರಣವೆಂದು ಆರೋಪಿಸಿದರು. ಮಹಿಳೆಯರು ದೇವಸ್ಥಾನ ಪ್ರವೇಶಿಸಲು ಕೇರಳ ಸರ್ಕಾರ ಅವಕಾಶ ನೀಡುವ ಮೂಲಕ ಶಬರಿಮಲೆಯ ಪಾವಿತ್ರ್ಯತೆಗೆ ದಕ್ಕೆ ಉಂಟು ಮಾಡಿದೆ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಪ್ರತಿಭಟನೆ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು. ಅಯ್ಯಪ್ಪ ಮಾಲಾಧಾರಿ ಶ್ರೀದೇವಿ ಮಾತನಾಡಿದರು.

ಹಿಂದೂ ಸಂಘಟನೆಗಳ ಪ್ರಮುಖರಾದ ಕುಕ್ಕೇರ ಅಜಿತ್, ಅರುಣ್ ಶೆಟ್ಟಿ, ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ ಹಾಗೂ ಅಯ್ಯಪ್ಪ ಮಾಲಾಧಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: