ಮೈಸೂರು

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾ ಹಾಗೂ ಶುಲ್ಕ ಹೆಚ್ಚಳದ ಪ್ರಸ್ತಾಪ ವಿರೋಧಿಸಿ ಪ್ರತಿಭಟನೆ

ಮೈಸೂರು,ಜ.4:- ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾ ಹಾಗೂ ಶುಲ್ಕ ಹೆಚ್ಚಳದ ಪ್ರಸ್ತಾಪವನ್ನು ವಿರೋಧಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಪ್ರತಿಭಟನೆ ನಡೆಸಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ ಐ ಆರ್ ಕೋಟಾ ಜಾರಿಗೆ ತರುವ ಪ್ರಸ್ತಾಪವನ್ನು ಹಿಂದಿನ ವೈದ್ಯಕೀಯ ಶಿಕ್ಷಣ ಸಚಿವರು ಇತ್ತೀಚೆಗೆ ಸದನದಲ್ಲಿ ಮಂಡಿಸಿದ್ದಾರೆ. ಈ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಿ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.10ರಷ್ಟು ಎನ್ ಆರ್ ಐ ಕೋಟಾ ಜಾರಿಗೆ ತಂದಿದ್ದೇ ಆದಲ್ಲಿ ಸಂವಿಧಾನ ಬಾಹಿರ ಹಾಗೂ ಸಹಜ ನ್ಯಾಯಕ್ಕೆ ವಿರುದ್ಧವಾದ ನಡೆ. ವೈದ್ಯಕೀಯ ಶಿಕ್ಷಣ ಇನ್ನಷ್ಟು ವ್ಯಾಪಾರೀಕರಣ-ಖಾಸಗೀಕರಣಗೊಳ್ಳಲಿದೆ. ಸೀಟುಗಳು ಕಡಿತವಾಗುತ್ತಾ ಹೋದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದರು.

ಎನ್ ಆರ್ ಐ ಕೋಟಾ ಜಾರಿಗೆ ತರುವ ಹಾಗೂ ವೈದ್ಯಕೀಯ ಸ್ನಾತಕೋತ್ತರ ಶುಲ್ಕಗಳನ್ನು ಹೆಚ್ಚಿಸುವ ಪ್ರಸ್ತಾಪ ಕೈಬಿಡಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಖಜಾಂಚಿ ಆಸೀಯಾ ಬೇಗಂ, ಆಕಾಶ್ ಕುಮಾರ್, ಚಂದ್ರಕಲಾ, ಸೇರಿದಂತೆ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: