ಕರ್ನಾಟಕಮೈಸೂರು

ಮೂಲ ಕಾರ್ಯಕರ್ತರ ಕಡೆಗಣನೆ; ಪಕ್ಷ ಉಳಿಸಲು ಸಿಎಂ ಸಿದ್ದರಾಮಯ್ಯ ವಿರುದ್ಧ ಆಂದೋಲನ

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗಿಂದಲೂ ಪಕ್ಷದಲ್ಲಿ ಮೂಲ ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತಾ ಮೂಲೆಗುಂಪಾಗಿಸುತ್ತಿದ್ದಾರೆ ಎಂದು ಚಾಮುಂಡೇಶ್ವರಿ ಬ್ಲಾಕ್ ಅಧ್ಯಕ್ಷ ಎನ್.ಎ. ಅರ್ಕೇಶ್ವರಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಪಕ್ಷವನ್ನು ಉಳಿಸುವುದಕ್ಕಾಗಿ “ಕಾಂಗ್ರೆಸ್ ಉಳಿಸಿ ಕಾರ್ಯಕರ್ತರನ್ನು ರಕ್ಷಿಸಿ” ಆಂದೋಲನವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಅವರು, ಬುಧವಾರ ಪತ್ರಕರ್ತ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂಲ ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದಲ್ಲಿ ಮಾನ್ಯತೆ ಇಲ್ಲ. ವಲಸೆ ಬಂದ ಘಟಸರ್ಪಗಳು ಕಾಂಗ್ರೆಸ್‍ ಅನ್ನು ಅಧೋಗತಿಯತ್ತ ಕೊಂಡೊಯ್ಯುತ್ತಿವೆ. ಸೌಜನ್ಯಕ್ಕಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಸ್ತುವಾರಿ ಸಚಿವವರಾದವರು ಕಾರ್ಯಕರ್ತರ ನೋವಿಗೆ ಸ್ಪಂದಿಸುತ್ತಿಲ್ಲ. ಪಕ್ಷಕ್ಕಾಗಿ ದಶಕಗಳ ಕಾಲ ದುಡಿಯುವ ನಿಷ್ಟಾವಂತ ಕಾರ್ಯಕರ್ತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ಈಗಾಗಲೇ ಪಕ್ಷದ ಹಿರಿಯ ಮುಖಂಡರಾದ ವಿ.ಶ್ರೀನಿವಾಸ ಪ್ರಸಾದ್, ಬೆಂಕಿ ಮಹದೇವ್, ಎಂ. ಶಿವಣ್ಣ, ಆರ್. ರಘು ಸೇರಿದಂತೆ ಇತರರು ಸಿದ್ದರಾಮಯ್ಯನವರ ಧೋರಣೆ ದಬ್ಬಾಳಿಕೆಗೆ ಬೇಸತ್ತು ಪಕ್ಷ ತ್ಯಜಿಸಿದ್ದು, ಇಂದು ಕಾಂಗ್ರೆಸ್ ಅಧೋಗತಿಯತ್ತ ಸಾಗುತ್ತಿದೆ ಎಂದು ನೋವಿನಿಂದ ನುಡಿದರು.

ಜಿಲ್ಲೆಯ ಆಯಕಟ್ಟಿನ ಸ್ಥಾನಗಳಿಗೆ ಸ್ವಜಾತಿಯವರನ್ನು ನೇಮಿಸಿಕೊಂಡಿರುವ ಮುಖ್ಯಮಂತ್ರಿಗಳು ಬೊಗಳೆ ಸಮಾಜವಾದಿ ಎಂದು ವ್ಯಂಗ್ಯವಾಡಿದ ಅವರು, ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್‍ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ದಲಿತ ವಿರೋಧಿ ಧೋರಣೆ ತೋರುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳು ನಿಂತ ನೀರಾಗಿವೆ. ದಲಿತರು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಡಾ. ಜಿ. ಪರಮೇಶ್ವರ್ ಅವರನ್ನು ಚುನಾವಣೆಯಲ್ಲಿ ಸೋಲಿಸುವ ಷಡ್ಯಂತ್ರ ನಡೆಸಿದರು ಎಂದು ಆರೋಪ ಮಾಡಿದರು. ಕೆ.ಪಿ.ಸಿ ಇಂದು ಸಿದ್ದರಾಮಯ್ಯನವರ ಕೈಗೊಂಬೆಯಾಗಿರುವುದು ದುರಂತವೆಂದರು.

ಪಕ್ಷನಿಷ್ಟರಿಗಿಲ್ಲ ನಿಗಮ ಮಂಡಳಿ ಸ್ಥಾನ-ಮಾನ:

ನಿಗಮ ಮಂಡಳಿಗಳಲ್ಲಿ ಅವಕಾಶವಿಲ್ಲದೆ ಮೂಲ ನಿಷ್ಟಾವಂತ ಕಾರ್ಯಕರ್ತರು ಅವಕಾಶ ವಂಚಿತರಾಗಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯ ದಿಗ್ವಿಜಯ್ ಸಿಂಗ್ ತೊಲಗಬೇಕು. ಈ ಬಗ್ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರಿಗೆ ಕಳೆದ ವರ್ಷವೇ ಪತ್ರ ಬರೆದು ಮನವಿ ಮಾಡಲಾಗಿದೆ.

ಸಿದ್ದರಾಮಯ್ಯನವರನ್ನು ಕಾಂಗ್ರೆಸ್‍ಗೆ ಕರೆತಂದ ಸಂಸದ ವಿಶ್ವನಾಥ್ ರಾಜಕೀಯ ನೆಲೆ ಕಳೆದುಕೊಂಡಿದ್ದಾರೆ. ಘಟಾನುಘಟಿಗಳು ಪಕ್ಷದಿಂದ ಹೊರ ನಡೆದಿದ್ದು ಪಕ್ಷವೂ ಕಳೆಗುಂದತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಪಕ್ಷ ಅಸ್ತಿತ್ವ ಉಳಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಮೂಲ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.

ಜೆ.ರವಿ ರಾಜೀನಾಮೆ:

ಇತ್ತೀಚೆಗೆ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಬೇಸತ್ತು ಹಾಗೂ ವಿ.ಶ್ರೀನಿವಾಸ ಪ್ರಸಾದ್ ಅವರ ನಾಯಕತ್ವವನ್ನು ಒಪ್ಪಿಕೊಂಡು ಕೃಷ್ಣರಾಜ ಡಿ.ದೇವರಾಜ ಅರಸ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಪ್ರಾಥಮಿಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಜೆ.ರವಿ ತಿಳಿಸಿದರು. ಪಕ್ಷದಿಂದ ಮನವೊಲಿಸಲು ಯಾವ ಮುಖಂಡರೂ ತಮ್ಮನ್ನು ಸಂಪರ್ಕಿಸಿಲ್ಲ. ಶ್ರೀನಿವಾಸ ಪ್ರಸಾದ್ ಅವರನ್ನು ಗುರುವಾಗಿ ಸ್ವೀಕರಿಸಿದ್ದು, ಅವರ ದಾರಿಯಂತೆ ನಡೆಯುವುದಾಗಿ ತಿಳಿಸಿದರು.

ಕಾಂಗ್ರೆಸ್ ಕಾರ್ಯಕರ್ತರಾದ ಶಿವಣ್ಣ, ಪ್ರಕಾಶ್, ವೆಂಕಟೇಶ್ ವೆಂಕಟೇಶ್ ಹಾಗೂ ಅಶೋಕಬಾಬು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: