ಮೈಸೂರು

ರಾಜ್ಯಾದ್ಯಂತ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಮೆ ನಿರ್ಮಿಸಬೇಕು : ಪ್ರೊ.ಕೆ.ಎಸ್.ಭಗವಾನ್

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಂಬೇಡ್ಕರ್ ಅವರಂತೆ ಮೀಸಲಾತಿಗೆ ಹೋರಾಟ ಮಾಡಿದವರಾಗಿದ್ದು, ರಾಜ್ಯದಾದ್ಯಂತ ಅವರ ಪ್ರತಿಮೆಗಳನ್ನು ನಿರ್ಮಾಣ ಮಾಡಬೇಕು ಎಂದು ಪ್ರೊ.ಕೆ.ಎಸ್.ಭಗವಾನ್ ಅಭಿಪ್ರಾಯಪಟ್ಟರು.

ಬುಧವಾರ ಮೈಸೂರಿನ ಗೋವರ್ಧನ್ ಹೋಟೆಲ್‍ನಲ್ಲಿ ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಕೆಎಸ್‍ಆರ್‍ಟಿಸಿ ನಿಗಮಗಳ ಎಸ್‍ಸಿ, ಎಸ್‍ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಂಘದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಹಿಂದೂ ಧರ್ಮದಲ್ಲಿನ ಶೋಷಣೆಯಿಂದ ಬೇಸತ್ತು ಬೌದ್ಧ ಧರ್ಮಕ್ಕೆ ಮತಾಂತರವಾದರು. ಹಿಂದೂ ಧರ್ಮ ಬ್ರಾಹ್ಮಣರ ಧರ್ಮವಾಗಿದ್ದು, ಮೇಲ್ವರ್ಗ ಎಂಬ ಅಹಮ್ಮಿನಿಂದ ಶೂದ್ರರನ್ನು ಶೋಷಣೆ ಮಾಡುತ್ತಿದ್ದರು. ಸರ್.ಎಂ.ವಿಶ್ವೇಶ್ವರಯ್ಯ ಅವರು ಸಹ ಮೀಸಲಾತಿಯನ್ನು ವಿರೋಧಿಸುತ್ತಿದ್ದರು. ಆದರೆ, ಇಂದು ಅವರ ಪ್ರತಿಮೆಗಳನ್ನು ಸ್ಥಾಪಿಸಿ ಪೂಜಿಸಲಾಗುತ್ತಿದೆ. ಪ್ರತಿಮೆ ನಿರ್ಮಾಣ ಮಾಡಬೇಕಿರುವುದು ದೂರದೃಷ್ಟಿಯುಳ್ಳ ನಾಲ್ವಡಿ ಕೃಷ್ಣರಾಜ ಒಡೆಯರಿಗೇ ಹೊರತು ವಿಶ್ವೇಶ್ವರಯ್ಯ ಅವರಿಗೆ ಅಲ್ಲ ಎಂದರು.

ಅಂಬೇಡ್ಕರ್ ಶೂದ್ರರು, ಶೋಷಿತರು, ಹಿಂದುಳಿದವರಿಗೆ ಹಿಂದೂ ಧರ್ಮದಲ್ಲಿನ ಶೋಷಣೆಯಿಂದ ಬೇಸತ್ತು ಮನು ಧರ್ಮವನ್ನು ಸುಟ್ಟುಹಾಕಿ ಶಾಂತಿ, ಸಾಮರಸ್ಯದಿಂದ ಕೂಡಿದ ಬೌದ್ಧ ಧರ್ಮ ಸೇರಿಕೊಂಡರು. ತಮ್ಮ ಜೀವಿತಾವಧಿಯಲ್ಲಿ ಹಿಂದುಳಿದವರನ್ನು ಮುಖ್ಯ ವಾಹಿನಿಗೆ ತರಲು ಅವಿರತವಾಗಿ ಶ್ರಮಿಸಿದರು. ಆದರೆ, ನಮ್ಮಲ್ಲಿನ ಗುಲಾಮಗಿರಿ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಸ್ವದೇಶಿ ಹಾಗೂ ವಿದೇಶಿ ಎಂಬ ಗುಲಾಮಗಿರಿಯಿದ್ದು ವಿದೇಶಿ ಗುಲಾಮಗಿರಿಯಿಂದ ತಪ್ಪಿಸಿಕೊಂಡರು. ದೇಶದ ಒಳಗಿರುವ ಗುಲಾಮಗಿರಿಯಿಂದ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದು ಬೆಂಬಿಡದೆ ಕಾಡುತ್ತಲೇ ಇರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ  ಡಾ.ವೆಂಕಟಸ್ವಾಮಿ, ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಮಹೇಶ್, ಎಂ.ಲಘುಮಯ, ಎಡತೊರೆ ನಿಂಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: