ಪ್ರಮುಖ ಸುದ್ದಿ

ಕೊಡವ ಕುಲಶಾಸ್ತ್ರ ಅಧ್ಯಯನಕ್ಕೆ ಮರುಚಾಲನೆ : ಕೆಪಿಸಿಸಿ ಉಪಾಧ್ಯಕ್ಷ ಮಿಟ್ಟು ಚಂಗಪ್ಪ ಸ್ವಾಗತ

ರಾಜ್ಯ(ಮಡಿಕೇರಿ) ಜ.5 : – ಕೊಡವ ಕುಲಶಾಸ್ತ್ರ ಅಧ್ಯಯನಕ್ಕೆ ಮರು ಚಾಲನೆ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕೆ.ಪಿ.ಸಿ.ಸಿ. ಹಿರಿಯ ಉಪಾಧ್ಯಕ್ಷರಾದ ಬೊಟ್ಟೊಳಂಡ ಮಿಟ್ಟು ಚಂಗಪ್ಪ ಸ್ವಾಗತಿಸಿದ್ದಾರೆ.

ಕೊಡವ ಜನಾಂಗದ ಉಳಿವು ಮತ್ತು ಪರಂಪರೆಯ ಬೆಳವಣಿಗೆಗೆ ಕುಲಶಾಸ್ತ್ರ ಅಧ್ಯಯನ ಪೂರಕವಾಗಿದ್ದು, ಈ ಪ್ರಕ್ರಿಯೆಗೆ ಮರುಜೀವ ನೀಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧಕ್ಷರಾದ ಸಿದ್ಧರಾಮಯ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ  ಪ್ರಿಯಾಂಕ ಖರ್ಗೆ ಅಭಿನಂದನಾರ್ಹರು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂಸತ್‍ನಲ್ಲಿ ವಿಚಾರ ಮಂಡಿಸಿದ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಪ್ರಯತ್ನವೂ ಶ್ಲಾಘನೀಯವಾಗಿದೆ. ವಿಶ್ವದ ಸೂಕ್ಷ್ಮ ಬುಡಕಟ್ಟು ಜನಾಂಗಗಳು ಈಗಾಗಲೇ ನಶಿಸಿ ಹೋಗುತ್ತಿದ್ದು, ಇದು ಆತಂಕದ ಬೆಳವಣಿಗೆಯಾಗಿದೆ. ಇದೀಗ ಸರಕಾರ ಹೊರಡಿಸಿರುವ ಆದೇಶ ಪಾಲನೆಯಿಂದ ಜನಾಂಗದ ಅಭಿವೃದ್ಧಿ ಮತ್ತು ರಕ್ಷಣೆ ಆಗಲಿದೆ ಎಂದು ಮಿಟ್ಟುಚಂಗಪ್ಪ ಅಭಿಪ್ರಾಯಪಟ್ಟಿದ್ದಾರೆ.

ಎಲ್ಲಾ ಜನಪ್ರತಿನಿಧಿಗಳು ರಾಜಕೀಯ ಹಿತಾಶಕ್ತಿಯನ್ನು ಬದಿಗಿರಿಸಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವುದು ಈಗಿನ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ. ರಾಜ್ಯ ಸರ್ಕಾರ ಸಿದ್ಧಪಡಿಸಿದ ವರದಿಯನ್ನು ಅನುಷ್ಠಾನಕ್ಕೆ ತರುವ ಜವಬ್ದಾರಿ ಕೇಂದ್ರ ಸರ್ಕಾರದ ಮೇಲಿದ್ದು, ಮುಂದಿನ ಪೀಳಿಗೆಯ ರಕ್ಷಣೆಗಾಗಿ ಈ ಕಾರ್ಯ ಯಶಸ್ವಿಯಾಗಬೇಕಿದೆ. ಸುಮಾರು 25 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿರುವ ಸಿ.ಎನ್.ಸಿ. ಮುಖ್ಯಸ್ಥ ನಂದಿನೆರವಂಡ ನಾಚಪ್ಪ ಅವರ ಶ್ರಮದ ಫಲವಾಗಿ ಈ ಯಶಸ್ಸು ದೊರೆತ್ತಿದ್ದು, ಅವರು ಅಭಿನಂದನಾರ್ಹರು ಎಂದು ಮಿಟ್ಟು ಚಂಗಪ್ಪ ಶ್ಲಾಘಿಸಿದ್ದಾರೆ.

ಜಿಲ್ಲೆಯ ಸರ್ವ ಜನರು ಕೊಡವ ಕುಲಶಾಸ್ತ್ರ ಅಧ್ಯಯನಕ್ಕೆ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಕೊಡವರ ಬಹುಕಾಲದ ಬೇಡಿಕೆಯನ್ನು ಪೂರೈಸುವಲ್ಲಿ ರಾಜ್ಯ ಸರ್ಕಾರ ಮುಂದಾಗಿರುವುದನ್ನು ರಾಜೀವ್ ಗಾಂಧಿ ಪಂಚಾಯ್ತ್ ರಾಜ್ ಸಂಘಟನೆ ಸ್ವಾಗತಿಸುತ್ತದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ತಿಳಿಸಿದ್ದಾರೆ.

ಸಿಎನ್‍ಸಿಯ ನಾಚಪ್ಪ ಅವರು ನಡೆಸಿದ ಸಂವಿಧಾನ ಬದ್ಧ ಹೋರಾಟ ಅವಿಸ್ಮರಣೀಯವಾಗಿದ್ದು, ಈ ಪ್ರಯತ್ನದಲ್ಲಿ ಯಶಸ್ಸು ಕಂಡ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ಹೇಳಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: