
ಕರ್ನಾಟಕಪ್ರಮುಖ ಸುದ್ದಿ
ನಮ್ಮ ರಾಜ್ಯದಲ್ಲೇ ಪೆಟ್ರೋಲ್, ಡೀಸೆಲ್ ಸೆಸ್ ಕಡಿಮೆ: ಸಿ.ಎಂ ಕುಮಾರಸ್ವಾಮಿ
ಹುಬ್ಬಳ್ಳಿ (ಜ.5): ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಅನ್ನು ಹೆಚ್ಚಿಸಿದ ನಿರ್ಧಾರವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಮರ್ಥಿಸಿಕೊಂಡಿದ್ದಾರೆ. ವಾಸ್ತವದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ನಮ್ಮ ರಾಜ್ಯದಲ್ಲೇ ಇಂಧನದ ಮೇಲಿನ ಸೆಸ್ ಕಡಿಮೆ ಇದೆ ಎಂದು ಸಿಎಂ ಹೇಳಿದ್ದಾರೆ.
ಸೆಸ್ ಏರಿಕೆಯಿಂದ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 1.30 ರೂ.ನಷ್ಟು ಹೆಚ್ಚಳವಾಗಿದೆ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ 69.21 ರೂ.ನಿಂದ 70.84 ರೂ.ಗೆ ಏರಿಕೆಯಾಗಿದೆ. ಡೀಸೆಲ್ ದರವು 63.01 ನಿಂದ 64.66ರಷ್ಟು ತುಟ್ಟಿಯಾಗಿದೆ. ಇದರಿಂದ ರಾಜ್ಯದ ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬಿದ್ದಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ, ರಾಜ್ಯದಲ್ಲಿನ ಪೆಟ್ರೋಲ್ ಬೆಲೆ, ನೆರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯೇ ಇದೆ. ರಾಷ್ಟ್ರವ್ಯಾಪಿ ತೈಲ ಬೆಲೆ ಏರಿಕೆಯಾಗಿದ್ದಾಗ ಮಾರಾಟ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 2 ರೂ.ಗೆ ಇಳಿಸಲಾಗಿತ್ತು ಎಂದು ಅವರು ಸಮರ್ಥನೆ ನೀಡಿದ್ದಾರೆ.
ಪೆಟ್ರೋಲ್ ಮೇಲಿನ ತೆರಿಗೆಯನ್ನು 3.25% ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು 3.27% ರಷ್ಟು ಹೆಚ್ಚಳ ಮಾಡಿ ಕುಮಾರಸ್ವಾಮಿ ಸೂಚನೆ ಹೊರಡಿಸಿದ್ದರು. ಸೆಪ್ಟೆಂಬರ್ ತಿಂಗಳಿನಿಂದ ಶೇ 28.75 ರಷ್ಟಿದ್ದ ಪೆಟ್ರೋಲ್ ಮೇಲಿನ ತೆರಿಗೆ ಶೇ 32ಕ್ಕೆ ಏರಿಕೆಯಾಗಿದೆ. ಡೀಸೆಲ್ ಮೇಲಿನ ತೆರಿಗೆ ಶೇ 17.73ರಿಂದ ಶೇ 21ಕ್ಕೆ ಹೆಚ್ಚಳವಾಗಿದೆ. (ಎನ್.ಬಿ)