ಕರ್ನಾಟಕ

ಸಾರ್ವಜನಿಕರಿಗೆ ಮರಳು ದೊರೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚನೆ

ಹಾಸನ (ಜ.5): ಜಿಲ್ಲೆಯಲ್ಲಿ ಆಕ್ರಮ ಮರಳು ಸಾಗಾಟವನ್ನು ಸಂಪೂರ್ಣವಾಗಿ ನಿಯಂತ್ರಿಸಿ ಸಾರ್ವಜನಿಕರಿಗೆ ಸುಲಭವಾಗಿ ಮರಳು ದೊರೆಯಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಾಜಕುಮಾರ್ ಕಟಾರಿಯ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು (ಶನಿವಾರ) ಅಧಿಕಾರಿಗಳ ಸಭೆ ನಡೆಸಿದ ಅವರು ಮರಳು ಹಾಗೂ ನೈಸರ್ಗಿಕ ಖನಿಜ ಸಂಪನ್ಮೂಲಗಳ ಅಕ್ರಮ ಸಾಗಾಟದ ಮೇಲೆ ವಿಶೇಷ ನಿಗಾವಹಿಸುವಂತೆ ತಿಳಿಸಿದರು.

ಹಾಸನದಲ್ಲಿ ಸಾಕಷ್ಟು ಮರಳು ಲಭ್ಯವಿದೆಯಾದರೂ ಸರ್ಕಾರಿ ಕಾಮಗಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಅದು ಸುಲಭವಾಗಿ ಸಿಗುತ್ತಿಲ್ಲ. ಅದಕ್ಕಾಗಿ ಒಂದು ವ್ಯವಸ್ಥಿತ ಮರಳು ವಿಲೇವಾರಿ ಯೋಜನೆ ರೂಪಿಸಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.

ಹರಾಜಾಗದೇ ಉಳಿದಿರುವ ಮರಳು ನಿಕ್ಷೇಪಗಳನ್ನು ಈ ಉದ್ದೇಶಕ್ಕೆ ಬಳಸಬಹುದಾಗಿದೆ ಒಂದು ದರ ನಿಗಧಿ ಪಡಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಂದ ಅನುಮತಿ ಪಡೆದ ಜಿ.ಪಿ.ಎಸ್ ವಾಹನಗಳ ಸಾಗಾಟ ಮಾಡಲು ಕ್ರಮವಹಿಸಬಹುದಾಗಿದೆ ಎಂದು ರಾಜ್‍ಕುಮಾರ್ ಕಟಾರಿಯ ಹೇಳಿದರು.

ಜಿಲ್ಲೆಯಲ್ಲಿ 40 ಬ್ಲಾಕ್‍ಗಳಿದ್ದು 23 ನಿಕ್ಷೇಪಗಳು ಮಾತ್ರ ಹರಾಜಾಗಿವೆ ಉಳಿದವುಗಳನ್ನು ಈ ಉದ್ದೇಶಕ್ಕೆ ಬಳಸಬಹುದಾಗಿದೆ. ಗ್ರಾಮ ಪಂಚಾಯಿತಿ, ತಹಶೀಲ್ದಾರ್ ಕಚೇರಿ ಅಥವಾ ಉಪವಿಭಾಗಾಧಿಕಾರಿ ಕಚೇರಿ ಮೂಲಕ ಇವುಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಅವರು ಹೇಳಿದರು.

ಸರ್ಕಾರಿ ಕಾಮಗಾರಿಗಳಿಗೆ ಬಳಸುವ ಮರಳು ಜಲ್ಲಿ ಮತ್ತಿತರ ಖನಿಜಗಳಿಗೆ ನಿರ್ಧಿಷ್ಠ ಪ್ರಮಾಣದಲ್ಲಿ ರಾಯಲ್ಟಿ ಕಟ್ಟಬೇಕಿದ್ದು ಪ್ರತಿ ಬಿಲ್ಲಿನ ಮೇಲೆ ಆ ಹಣ ಕಟಾಯಿಸಿ ಕಟ್ಟುವಂತೆ ಅವರು ಲೋಕೋಪಯೋಗಿ ಹಾಗೂ ಎತ್ತಿನ ಹೊಳೆ ಯೋಜನೆಗಳ ಕಾರ್ಯಪಾಲಕ ಇಂಜಿನಿಯರ್‍ಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಮಾತನಾಡಿ ಅಕ್ರಮ ಮರಳು ಸಾಗಾಟದ ಮೇಲೆ ಸಾಕಷ್ಟು ನಿಗಾವಹಿಸಲಾಗಿದೆ ಸಾರ್ವಜನಿಕರಿಗೆ ಮರಳು ವಿತರಣೆಗೆ ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದೆ. ಉಪವಿಭಾಗಾಧಿಕಾರಿಯವರ ಮೂಲಕ ಆಯಾಯ ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಮರಳು ಬ್ಲಾಕ್‍ಗಳನ್ನು ಗುರುತಿಸಿ ಸಾರ್ವಜನಿಕರು ಹಾಗೂ ಸರ್ಕಾರಿ ಕಾಮಗಾರಿಗಳಿಗೆ ವಿತರಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.

ಪ್ರೋಬೇಷನರಿ ಐ.ಎ.ಎಸ್. ಅಧಿಕಾರಿ ಪ್ರಿಯಾಂಗ, ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಉಪವಿಭಾಗಾಧಿಕಾರಿ ಡಾ|| ಹೆಚ್.ಎಲ್. ನಾಗರಾಜ್, ಸಕಲೇಶಪುರ ಉಪವಿಭಾಗಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಹಾಗೂ ಎತ್ತಿನ ಹೊಳೆ ಯೋಜನೆಯ ಕಾರ್ಯಪಾಲಕ ಇಂಜಿನಿಯರ್ ಮತ್ತಿತರರು ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: