ಮೈಸೂರು

ರಂಗ ತರಬೇತಿ ರಂಗ ಪ್ರದರ್ಶನಗಳತ್ತ ಒಲವು ತೋರುತ್ತಿರುವುದು ಸಂತೋಷದ ವಿಷಯ : ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್

ಅಪ್ರವರಂಬೆ ಬೇರು-ಚಿಗುರು ರಂಗಸಂಭ್ರಮ ನಾಟಕೋತ್ಸವಕ್ಕೆ ಚಾಲನೆ

ಮೈಸೂರು,ಜ.5:- ರಾಮಕೃಷ್ಣ ನಗರದ ನೃಪತುಂಗ ಕನ್ನಡ ಶಾಲೆಯಲ್ಲಿರುವ ಬೇಂದ್ರೆ ಬಯಲು ರಂಗ ಮಂದಿರದಲ್ಲಿ ನಿನ್ನೆ ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್  ಅಪ್ರವರಂಬೆ ಬೇರು-ಚಿಗುರು ರಂಗಸಂಭ್ರಮ ನಾಟಕೋತ್ಸವವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು  “ಪಂಪ, ರನ್ನರ ಕಾವ್ಯಗಳಲ್ಲಿಯೇ ನಾಟಕದ ಸುಳುಹುಗಳು ದೊರೆಯುತ್ತವೆ. ಆದರೆ 18ನೆಯ ಶತಮಾನದ ಸಿಂಗಾರಾರ್ಯನ ಮಿತ್ರಾವಿಂದ ಗೋವಿಂದ ಮತ್ತು ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ ಬರುವವರೆಗೆ ಕನ್ನಡ ಸಾಹಿತ್ಯದಲ್ಲಿ ಲಿಖಿತ ನಾಟಕಗಳು ದೊರೆತೇ ಇಲ್ಲ . ಇಂದು ರಂಗ ತರಬೇತಿ ರಂಗ ಪ್ರದರ್ಶನಗಳತ್ತ ಒಲವು ತೋರುತ್ತಿರುವುದು ಸಂತೋಷದ ವಿಷಯ. ರವಿರಂಗ ಮಕ್ಕಳ ರಂಗಶಾಲೆಯ ಮೂಲಕ ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಒತ್ತು ಕೊಡುತ್ತಿರುವುದು ಮತ್ತು ಮಕ್ಕಳನ್ನು ರಂಗಮುಖಿಯಾಗಿಸುವಲ್ಲಿ ಸಂಘಟಕ ನಾಗಚಂದ್ರರವರ ಪ್ರಯತ್ನ ಶ್ಲಾಘಿಸಿದರು.

ಪ್ರಸಿದ್ಧ ಸಾಹಿತಿಗಳು, ಅಂಕಣಕಾರರು ಆದ ಪ್ರೊ. ಕೆ. ಭೈರವಮೂರ್ತಿರವರು ಅಪ್ರವರಂಬೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಅಪ್ರವರಂಬೆ ಹಾಗೂ ರವಿರಂಗ ಮಕ್ಕಳ ರಂಗಶಾಲೆಯ ಕಾರ್ಯಚಟುವಟಿಕೆಗಳನ್ನು ಬೆಂಬಲಿಸಿ “ಟಿ.ವಿ. , ವಿಡೀಯೋ ಆಟಗಳು , ಕಂಪ್ಯೂಟರ್ ಮತ್ತು ಮೊಬೈಲ್ ಗಳಿಂದ ಮಕ್ಕಳನ್ನು ದೂರ ಇರಿಸುವಲ್ಲಿ ಈ ರಂಗ ತರಬೇತಿ ಯಶಸ್ವಿಯಾಗಿದೆ” ಎಂದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ರಂಗತಜ್ಞ ಪಿ.ಗಂಗಾಧರಸ್ವಾಮಿಯವರು “ಇಂಥ ಮಕ್ಕಳ ರಂಗ ತರಬೇತಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಹೆಚ್ಚು ಹೆಚ್ಚು ಸೇರಿಸಿ , ಅವರನ್ನು ಕ್ರಿಯಾಶೀಲರನ್ನಾಗಿ ಮಾಡಿ ಅವರ ಬುದ್ಧಿ ಹೆಚ್ಚಿಸಲು ಸಹಕರಿಸಿ ಎಂದು ಕರೆನೀಡಿದರು”. ಈ ಸಾಲಿನ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಪಿ.ಗಂಗಾಧರಸ್ವಾಮಿ , ಕಿರಗಸೂರು ರಾಜಪ್ಪ ಮತ್ತು ಮೈಮ್ ರಮೇಶ್‍ರವರನ್ನು ಅಭಿನಂದಿಸಲಾಯಿತು. ಡಿ.ನಾಗೇಂದ್ರಕುಮಾರ್ ಅವರ ಪ್ರಾರ್ಥನೆಯ ನಂತರ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ನಾ.ನಾಗಚಂದ್ರ ಸ್ವಾಗತಿಸಿ,  ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ನಾಗಭೂಷಣ.ಎನ್ ವಂದಿಸಿದರು. (ಎಸ್.ಎಚ್)

Leave a Reply

comments

Related Articles

error: