ಮೈಸೂರು

ಒಡನಾಡಿಯ ಮಡಿಲಲ್ಲಿ   “ಮಾನವಿ’ಸ್ ವುಮೆನ್” ಬ್ಯೂಟಿಪಾರ್ಲರ್ ಉದ್ಘಾಟನೆ

ಮೈಸೂರು,ಜ.5:- ಒಡನಾಡಿಯ ಮಡಿಲಿನಲ್ಲಿ ಇಂದು “ಮಾನವಿಸ್ ವುಮೆನ್” ಬ್ಯೂಟಿಪಾರ್ಲರ್ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಒಡನಾಡಿಯ “ಮಾನವಿ ಸೌಂದರ್ಯಸ್ವಾಸ್ಥ್ಯ ತರಬೇತಿ ಕೇಂದ್ರ”ದಲ್ಲಿ ಈಗಾಗಲೇ 1800ಕ್ಕೂ ಹೆಚ್ಚು ಹೆಣ್ಣುಮಕ್ಕಳು ಬ್ಯೂಟೀಷಿಯನ್ ವೃತ್ತಿ ತರಬೇತಿಯನ್ನು ಪಡೆದಿದ್ದು, ಸಮಾಜದ ಮುಖ್ಯವಾಹಿನಿಯಲ್ಲಿ ಘನತೆಯುಕ್ತ ಬದುಕನ್ನು ಕಟ್ಟಿಕೊಳ್ಳುವಲ್ಲಿ ಸಾಫಲ್ಯ ಕಂಡಿದ್ದಾರೆ. ಈಗಾಗಲೇ ತರಬೇತಿ ಪಡೆದು, ಪರಿಣಿತಿ ಹೊಂದಿ ಬ್ಯೂಟಿಪಾರ್ಲರ್ ಉದ್ಯಮ ನಡೆಸಲು ಸಿದ್ಧವಾಗಿರುವ ಒಡನಾಡಿಯ ಆರು ಹೆಣ್ಣುಮಕ್ಕಳ ಆರ್ಥಿಕ ಸಶಕ್ತತೆಗಾಗಿ “ಮಾನವಿ’ಸ್ ವುಮೆನ್” ಬ್ಯೂಟಿ ಪಾರ್ಲರ್” ಅನ್ನು  ಒಡನಾಡಿಯು ಇಂದು ಸಮರ್ಪಿಸಿತು.

ಮಾನವಿ”ಸ್‍ವುಮೆನ್” ಉದ್ಘಾಟನೆ ಮಾಡಿದ ಮೈಸೂರು ಜಿಲ್ಲಾ ಬ್ಯೂಟಿಪಾರ್ಲರ್ ಅಸೋಷಿಯೇಷನ್‍ನ ಅಧ್ಯಕ್ಷೆ ಸುಜಾತ ಸಿಂಗ್‍ ಮಾತನಾಡಿ “ನಾನು ನನ್ನ ವೃತ್ತಿ ಬದುಕಿನಲ್ಲಿ ಬಹಳಷ್ಟು ಜನರಿಗೆ ತರಬೇತಿಯನ್ನು ನೀಡಿದ್ದೇನೆ. ಆದರೆ ಒಡನಾಡಿಯಲ್ಲಿ ಭಿನ್ನ-ವಿಭಿನ್ನ ಅನುಭವಗಳಿವೆ. ಇಲ್ಲಿನ ಆಶ್ರಿತರು ತಮ್ಮೆಲ್ಲಾ ಸಮಸ್ಯೆಗಳನ್ನು ಬದಿಗೊತ್ತಿ, ಬದುಕು ಕಟ್ಟಕೊಳ್ಳುವ ಕಾಯಕಕ್ಕೆ ಬದ್ಧರಾಗಿ ಇಂದು ತಮ್ಮ ಹೊಸ ಗುರಿಯೆಡೆಗೆ ಹೆಜ್ಜೆ ಇಟ್ಟಿದ್ದಾರೆ. ಇವರಿಗೆ ಸ್ಪೂರ್ತಿ ತುಂಬಿದ ಒಡನಾಡಿಗೆ ನನ್ನ ಅಭಿನಂದನೆಗಳು. ಇಂತಹ ಹೆಣ್ಣುಮಕ್ಕಳು ನೆಲೆಕಂಡುಕೊಂಡರೆ ಅದರಿಂದ ತೃಪ್ತಿಯೇ ಬೇರೆ. ಈ ನಿಟ್ಟಿನಲ್ಲಿ ಜಿಲ್ಲಾ ಬ್ಯೂಟಿಪಾರ್ಲರ್ ಅಸೋಷಿಯೇಷನ್ ಸದಾ ಈ ಯುವತಿಯರ ಜೊತೆಗಿರುತ್ತದೆ” ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಬ್ಯೂಟಿಪಾರ್ಲರ್ ಅಸೋಷಿಯೇಷನ್‍ನ ಕಾರ್ಯದರ್ಶಿ ವೇದಾ ಜೈನ್‍ ಮಾತನಾಡಿ “ಸಂಘ-ಸಂಸ್ಥೆಗಳು ಮೂಲಭೂತ ಸೌಲಭ್ಯಗಳನ್ನು ಕೊಡುವುದು ಸಾಮಾನ್ಯ ವಿಚಾರ, ಆದರೆ ಅವರಿಗೆ ಶಾಶ್ವತವಾದ ಬದುಕಿನ ನಿಯಮಗಳನ್ನು, ಬದ್ಧತೆಯನ್ನು, ಬದುಕಿನ ದಾರಿಯನ್ನು ತೋರಿಸುವುದು ವಿಶೇಷವೇ ಸರಿ. ಈ ನಿಟ್ಟಿನಲ್ಲಿ ಒಡನಾಡಿಯ ಸೇವೆ ಪ್ರಶಂಸನೀಯ” ಎಂದು ಅಭಿಪ್ರಾಯಿಸಿದರು.

ಶಾರದ ವಿಲಾಸ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಶಶಿಕಲಾ ಮಾತನಾಡಿ “ನಾನು ಕಳೆದ 25 ವರ್ಷಗಳಿಂದ ಒಡನಾಡಿಯನ್ನು ಅರಿತಿದ್ದೇನೆ, ಅದರ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಾ ಬಂದಿದ್ದೇನೆ. ಇದು ಕೇವಲ ಕಾರ್ಯಕ್ರಮವೆಂದು ನಾನು ಭಾವಿಸುವುದಿಲ್ಲ, ಬದಲಾಗಿ ಜೀವನದ ಅಂಗವಾಗಿ ನೋಡುತ್ತೇನೆ. ಇದರ ಹಿಂದೆ ಒಂದು ಸ್ಪಷ್ಟವಾದ ಉದ್ದೇಶವಿದೆ, ಹೀಗಾಗಿ ಸಾಗುವ ದಾರಿಯೂ ಅಷ್ಟೇ ಸ್ಪಷ್ಟವಾಗಿದೆ” ಎಂದು ತಿಳಿಸಿದರು.

ಒಡನಾಡಿಯ ಸ್ಟ್ಯಾನ್ಲಿ-ಪರಶು ಉಪಸ್ಥಿತರಿದ್ದರು.  ನೂತನ ಬ್ಯೂಟೀಷಿಯನ್‍ಗಳಾದ ರೇಣುಕಾ, ಸೀಮಾ, ರುಮಾನ ಬೇಗಂ, ರಂಜಿತ, ಉಷಾ ಹಾಗೂ ನಿಖಿತಾ ತಮ್ಮ ತರಬೇತಿಯ ಅನುಭವಗಳನ್ನು ಹಾಗೂ ವೃತ್ತಿ ಬದುಕಿನ ಕನಸುಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಧನಂಜಯ ಈಲಿಯೂರು, ಮಹಿಳಾ ಆಟೋ ಚಾಲಕಿ ಛಾಯಾ, ವಸತಿ ಮೇಲ್ವಿಚಾರಕಿ ಪ್ರಭಾಮಣಿ ಎಸ್ ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: