ಮೈಸೂರು

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಿಸಿರುವ ರಾಜ್ಯ ಸರ್ಕಾರದ ನಡೆಗೆ ಎಸ್ ಯುಸಿಐ(ಸಿ) ಖಂಡನೆ

ಮೈಸೂರು,ಜ.7:- ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್‍ಗಳ ಮೇಲೆ ತೆರಿಗೆಯನ್ನು ಏರಿಕೆ ಮಾಡಿರುವುದನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷವು ತೀವ್ರವಾಗಿ ಖಂಡಿಸಿದೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಎಸ್‍ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಬಿ.ರವಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಇಳಿಕೆಯಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಇದರಿಂದ ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿತ್ತು. ತೈಲ ಬೆಲೆ ಏರಿಕೆಯ ವಿರುದ್ಧ ಕಳೆದ ಸೆಪ್ಟೆಂಬರ್ 10ರಂದು ಭಾರತಾದ್ಯಂತ ಯಶಸ್ವಿ ಹರತಾಳವೂ ನಡೆದಿತ್ತು. ಜನಾಕ್ರೋಶಕ್ಕೆ ಮಣಿದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್‍ಗಳ ಮೇಲಿನ ತೆರಿಗೆಯನ್ನು ತಲಾ ರೂ. 2ರಷ್ಟು ಇಳಿಕೆ ಕೂಡ ಮಾಡಿದ್ದವು. ಆದರೆ ಈಗ ಜಾಗತಿಕ ಮಟ್ಟದಲ್ಲಿ ಆಗಿರುವ ಇಳಿಕೆಯ ಲಾಭವನ್ನು ಜನರಿಗೆ ವರ್ಗಾಯಿಸುವ ಬದಲಿಗೆ ರಾಜ್ಯ ಸರ್ಕಾರವು ತೆರಿಗೆ ಏರಿಕೆ ಮಾಡಿರುವುದು ಜನವಿರೋಧಿ ಕ್ರಮವಾಗಿದೆ.

ಪೆಟ್ರೋಲಿನ ಮೇಲಿನ ತೆರಿಗೆಯನ್ನು ಶೇ.28.75ರಿಂದ ಶೇ. 32ಕ್ಕೆ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಶೇ. 17.73ರಿಂದ ಶೇ. 21ಕ್ಕೆ ಏರಿಕೆ ಮಾಡಲಾಗಿದೆ. ಇದರ ಪರಿಣಾಮವಾಗಿ ಪ್ರತಿ ಲೀಟರಿಗೆ ಸುಮಾರು ರೂ. 2ರಷ್ಟು ಏರಿಕೆಯಾಗಿದೆ. ಕೇಂದ್ರ ಮತ್ತು ರಾಜ್ಯಗಳ ತೆರಿಗೆ ಸೇರಿ ಜನರು ಪೆಟ್ರೋಲ್, ಡೀಸೆಲ್‍ಗಳ ಮೇಲೆ ಒಟ್ಟಾರೆ ಸುಮಾರು ಶೇ. 100ರಷ್ಟು ತೆರಿಗೆ ಪಾವತಿಸುತ್ತಿದ್ದಾರೆ. ಈ ತೆರಿಗೆಗಳನ್ನು ಕಡಿತ ಮಾಡುವ ಬದಲಿಗೆ ಹೆಚ್ಚಿಸಿರುವುದು ಖಂಡನೀಯ. ರಾಜ್ಯ ಸರ್ಕಾರ ತನ್ನ ದುಂದುವೆಚ್ಚ, ಭ್ರಷ್ಟಾಚಾರಗಳನ್ನು ತೊಲಗಿಸಿ, ಖರ್ಚನ್ನು ಕಡಿಮೆ ಮಾಡುವ ಬದಲಿಗೆ ತೆರಿಗೆ ಹೆಚ್ಚಿಸಿರುವುದು ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಡೀಸೆಲ್ ಬೆಲೆ ಇಳಿಕೆಯಾದಾಗ ದರ ಕಡಿತ ಮಾಡದ ಕೆಎಸ್‍ಆರ್‍ಟಿಸಿ, ಈಗ ಮತ್ತೆ ದರ ಏರಿಕೆ ಮಾಡಲು ಚಿಂತನೆ ನಡೆಸುತ್ತಿರುವುದನ್ನು ಎಸ್‍ಯುಸಿಐ(ಸಿ) ತೀವ್ರವಾಗಿ ವಿರೋಧಿಸುತ್ತದೆ. ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಕೇಂದ್ರ ಬಿಜೆಪಿ ಸರ್ಕಾರದ ಜನವಿರೋಧಿ, ಬಂಡವಾಳಶಾಹಿ ಕ್ರಮಗಳನ್ನು ಕೇವಲ ಬಾಯಿಮಾತಿನಲ್ಲಿ ಮಾತ್ರ ವಿರೋಧಿಸಿ, ಆರ್ಥಿಕ ನೀತಿಗಳಲ್ಲಿ ಅದೇ ರೀತಿಯಲ್ಲಿ ಜನರನ್ನು ಸುಲಿಗೆ ಮಾಡಲು ಮುಂದಾಗಿರುವುದನ್ನು ರಾಜ್ಯದ ಜನತೆ ಒಪ್ಪುವುದಿಲ್ಲ ಎಂಬುದನ್ನು ಹೇಳಬಯಸುತ್ತೇವೆ. ತಕ್ಷಣವೇ ಈ ತೆರಿಗೆ ಏರಿಕೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತಾ, ಇದಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಡಲು ಜನತೆ ಮುಂದಾಗಬೇಕೆಂದು ಎಸ್‍ಯುಸಿಐ(ಸಿ)ಕರೆ ನೀಡುತ್ತದೆ ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: