ಪ್ರಮುಖ ಸುದ್ದಿಮೈಸೂರು

ಕುಲಶಾಸ್ತ್ರ ಅಧ‍್ಯಯನಕ್ಕೆ ಮರು ಚಾಲನೆ : ಕೊಡವರ ಸ್ವಾಗತ

ಸಂವಿಧಾನ ತಿದ್ದುಪಡಿಗೆ ಒತ್ತಾಯ

ಮೈಸೂರು, ಜ.7 : ಸ್ಥಗಿತಗೊಂಡಿದ್ದ ಕೊಡವರ ಕುಲಶಾಸ್ತ್ರ ಅಧ್ಯಯನಕ್ಕೆ ಮರು ಚಾಲನೆ ದೊರಕಿರುವುದು ಸ್ವಾಗತಾರ್ಹವಾಗಿದ್ದು, ಈ ಸರ್ವೇ ಕಾರ್ಯವನ್ನು ತ್ವರಿತಗೊಳಿಸಿ, ಅದನ್ನು ಸಂವಿಧಾನ ತಿದ್ದುಪಡಿಗಾಗಿ ಕೇಂದ್ರಕ್ಕೆ ಕಳುಹಿಸುವ ಕೆಲಸವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದೆ.

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ, ಕೊಡವರ ಅತ್ಯುತ್ತಮ, ಸುಂದರ ಮತ್ತು ಸುಭದ್ರ ನಾಳೆಗಳಿಗಾಗಿ ಈ ಉದ್ದೇಶಿತ ಕುಲಶಾಸ್ತ್ರ ಅಧ್ಯಯನಕ್ಕೆ ಕೌನ್ಸಿಲ್ ಸಂಪೂರ್ಣ ಸಹಕಾರ ನೀಡಲಿದೆ. ಇದರಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಯ್ದೆ ಬದ್ಧವಾಗಿ ರೂಪಿಸುವ ಸಕಾರಾತ್ಮಕ ಕಲ್ಯಾಣ ರಾಜ್ಯ ವ್ಯವಸ್ಥೆ ಮತ್ತು ಸಬಲೀಕರಣ ಪ್ರಕ್ರಿಯೆ ಪರಿಧಿಯೊಳಗೆ ಕೊಡವ ಬುಡಕಟ್ಟು ಪ್ರದೇಶ ಪಡೆದು ಅದರ ಸಂಪೂರ್ಣ ಫಲಾನುಭವಿಗಳಾಗುವ ಅವಕಾಸ ಕೊಡವರಿಗೆ ದೊರಕುತ್ತದೆ.

ಇನ್ನು, ಸಂವಿಧಾನದ 51 ಎ ಎಫ್ ವಿಧಿ ಪ್ರಕಾರ ಒಂದು ಸೀಮಿತ ಪ್ರದೇಶದಲ್ಲಿ ವ್ಯಾಪಿಸಿ ವಾಸಿಸುತ್ತಿರುವ ಯಾವುದೇ ಸೂಕ್ಷ್ಮಾತಿ ಸೂಕ್ಷ್ಮ ವಿರಳ ಸಂಖ್ಯೆ ಅಪರೂಪದ ಅಲ್ಪ ಸಂಖ್ಯಾತ ಬುಡಕಟ್ಟು ಕುಲದ ಚಾರಿತ್ರಿಕ ನಿರಂತರತೆಯ ಸ್ಥಿರೀಕರಣ, ಸಾಂಪ್ರದಾಯಿಕ ಆವಾಸ ಸ್ಥಾನದ ಸ್ಥಿರತೆ, ಅವರ ಪಾರಂಪರಿಕ ಜನ್ಮ ಭೂಮಿ, ಭಾಷೆ, ನೆಲೆ, ಸಂಸ್ಕೃತಿ ಮತ್ತು ಪಾರಂಪರಿಕ ಹಕ್ಕುಗಳನ್ನು ಜೋಪಾನ ಮಾಡುವುದು ಬಹು ಸಂಖ್ಯಾತ ಜನಾಂಗ ಮತ್ತು ಬಹು ಸಂಖ್ಯಾತರಿಂದ ಆಳಲ್ಪಡುವ ರಾಜ್ಯ ಸರ್ಕಾರಗಳ ಆದ್ಯ ಜವಾಬ್ದಾರಿ ಮತ್ತ ಕರ್ತವ್ಯವೆಂದು ವಿಶ್ವಸಂಸ್ಥೆ ಸಹಾ ತನ್ನ ಚಾರ್ಟರ್‌ನಲ್ಲಿ ತಿಳಿಸಿದು, ಅದರ ಅಡಿಯಲ್ಲಿ ಈ ಕುಲಶಾಸ್ತ್ರ ಅಧ್ಯಯನ ಪ್ರಾಮುಖ್ಯತೆ ಪಡೆದಿದೆ ಎಂದು ಹೇಳಿದರು.

ಅಲ್ಲದೆ, ಈ ಸರ್ವೇಕ್ಷಣೆ ಯಾವುದೇ ಪೂರ್ವಗ್ರಹ ಇಲ್ಲದೆ ನಡೆಯಬೇಕು, ಅದನ್ನು ಸಂವಿಧಾನ ತಿದ್ದುಪಡಿಗೆ ಕಳುಹಿಸುವ ಮೂಲಕ ರಾಜ್ಯ ಸರ್ಕಾರ ಸಹಾ ತನ್ನ ಬದ್ಧತೆ ಪ್ರದರ್ಶಿಸಬೇಕೆಂದು ಮನವಿ ಮಾಡಿದರು.

ಅಪ್ಪಾರಂಡ ರೀನಾ ಪೂವಣ್ಣ, ಯು.ಕೆ. ದಿಲೀಪ್, ಅರೆಯಡ ಗಿರೀಶ, ಚಂಬಂಡ ಜನತ್ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: