ಮೈಸೂರು

ಮೈಸೂರಿಗೆ ಈ ಬಾರಿ ಮತ್ತೆ ಸ್ವಚ್ಛನಗರಿ ಪಟ್ಟ ವಿಶ್ವಾಸ ವ್ಯಕ್ತಪಡಿಸಿದ ರಾಜಮಾತೆ ಪ್ರಮೋದಾದೇವಿ ಒಡೆಯರ್

ಮೈಸೂರು,ಜ.7:- ಮೈಸೂರು ಈ ಬಾರಿ ಸ್ವಚ್ಛನಗರಿ ಪಟ್ಟ ಪಡೆಯಲಿ ಎಂಬುದು ನಮ್ಮ ಉದ್ದೇಶ. ಕಳೆದ ಬಾರಿ ಸರ್ವಜನಿಕರ ನಿರಾಸಕ್ತಿಯಿಂದ ನಾವು ಸ್ವಚ್ಛತಾ ಪಟ್ಟ ಕಳೆದುಕೊಂಡಿದ್ದೆವು. ಈ ಬಾರಿ ಮೈಸೂರಿಗೆ ಮತ್ತೆ  ಸ್ವಚ್ಛನಗರಿ ಪಟ್ಟ ಬರುತ್ತೆ ಅನ್ನೊ ವಿಶ್ವಾಸವಿದೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.

ಮೈಸೂರಿನಲ್ಲಿ ಸ್ವಚ್ಛ ಸರ್ವೇಕ್ಷಣೆ ಹಿನ್ನೆಲೆಯಲ್ಲಿ ಪಾಲಿಕೆ ನಿಯೋಗ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿಯಾಗಿದ್ದು,  ಫಲತಾಂಬೂಲ ನೀಡಿ ಸ್ವಚ್ಛ ಸರ್ವೇಕ್ಷಣೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು ಸಾರ್ವಜನಿಕರು ಸ್ವಚ್ಛ ಸರ್ವೇಕ್ಷಣೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು.ಪಾಲಿಕೆಯ ಸ್ವಚ್ಛತಾ ಆ್ಯಪ್ ನ್ನು ಎಲ್ಲರೂ ಡೌನ್ ಲೋಡ್ ಮಾಡಿಕೊಳ್ಳಿ ಎಂದು ಕರೆ ನೀಡಿದರಲ್ಲದೇ, ಸ್ವಚ್ಛ ಸರ್ವೇಕ್ಷಣೆಗೆ ಸಾರ್ವಜನಿಕರು ಅಭಿಯಾನದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.

ಇದೇ ವೇಳೆ ಹೆರಿಟೇಜ್ ಕಟ್ಟಡಗಳ ಉಳಿಸಿಕೊಳ್ಳುವ ಸಂಬಂಧ ಮೇಯರ್ ಜೊತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚರ್ಚೆ ನಡೆಸಿದ್ದು, ಸುಮಾರು ಅರ್ಧಗಂಟೆಗಳ ಕಾಲ ಪಾರಂಪಾರಿಕ ಕಟ್ಟಡಗಳ ಉಳಿವಿನ ಬಗ್ಗೆ ಮೇಯರ್ ಜೊತೆ ಚರ್ಚೆ ನಡೆಸಿದ್ದಾರೆ. ಹೆರಿಟೇಜ್ ಸಿಟಿಯಲ್ಲಿ ಹೆರಿಟೇಜ್ ಬಿಲ್ಡಿಂಗ್ ಇಲ್ಲ ಅಂದ್ರೆ ಹೇಗೆ? ನೀವು ಹೆರಿಟೇಜ್ ಬಿಲ್ಡಿಂಗ್ ಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ಅವರಿಗೆ ಸೂಚನೆ ನೀಡಿದರು. ಮೈಸೂರಿನಲ್ಲಿ ಸಾಕಷ್ಟು ಪಾರಂಪರಿಕ ಕಟ್ಟಡಗಳಿವೆ ಅವೆಲ್ಲವನ್ನೂ ಉಳಿಸುವ ಪ್ರಯತ್ನ ಮಾಡಬೇಕು. ಲಾನ್ಸ್ ಡೌನ್ ಬಿಲ್ಡಿಂಗ್, ದೇವರಾಜ ಮಾರುಕಟ್ಟೆ ಸೇರಿದಂತೆ ಹಲವು ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಹಾಗೂ ಪಾಲಿಕೆ ಮುಂದಾಗಲಿ ಎಂದು ಆಗ್ರಹಿಸಿದರು.

ಮೈಸೂರಿನಲ್ಲಿ ಕಟ್ಟಡ ಗಳನ್ನು ಉಳಿಸಿಕೊಳ್ಳುವ ಸಂಬಂಧ ಕೌನ್ಸಿಲ್ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಹೆರಿಟೇಜ್ ಬಿಲ್ಡಿಂಗ್ ಉಳಿವಿಗಾಗಿ ಪಾಲಿಕೆ ಸದಾ ಸಿದ್ಧವಿದೆ ಎಂದು  ಮೇಯರ್ ಭರವಸೆ ನೀಡಿದರು.

ಈ ಸಂದರ್ಭ  ಉಪಮೇಯರ್ ಶಫೀ ಅಹಮ್ಮದ್, ಪಾಲಿಕೆ ಆಯುಕ್ತ ಜಗದೀಶ್, ಆರೋಗ್ಯಾಧಿಕಾರಿ ಡಾ.ನಾಗರಾಜ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮಣಿ ರಮೇಶ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: