ಪ್ರಮುಖ ಸುದ್ದಿ

ಬಂದ್ ಕರೆ ಹಿನ್ನೆಲೆ : ರಾಜ್ಯದಲ್ಲಿ ಬಿಗಿ ಪೊಲೀಸ್ ಭದ್ರತೆ; ಸಚಿವ ಎಂ.ಬಿ.ಪಾಟೀಲ್

ರಾಜ್ಯ(ಬೆಂಗಳೂರು)ಜ.8:- ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಮೋಟಾರು ವಾಹನ ತಿದ್ದುಪಡಿ ಮಸೂದೆ 2017 ವಿರೋಧಿಸಿ, ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸುವುದು ಸೇರಿ ಇತರೆ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಇಂದು ಜ. 8 ಮತ್ತು 9 ಜನವರಿ 2019 ರಂದು 48 ಗಂಟೆಗಳ ಕಾಲ ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದು, ಕರ್ನಾಟಕ ರಾಜ್ಯದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು ಈ ಸಮಯದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಯಾವುದೇ ಅಡ್ಡಿಯುಂಟಾಗಬಾರದೆಂಬ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 54ಸಾವಿರ ಪೊಲೀಸ್ ಬಲವನ್ನು 8ನೇ ಜನವರಿ 2019ರ ಬೆಳಿಗ್ಗೆ 6 ಗಂಟೆಯಿಂದ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹಿರಿಯ ಅಧಿಕಾರಿಗಳಾದ ಪೊಲೀಸ್ ಅಧೀಕ್ಷಕರುಗಳು ಹಾಗೂ ಪೊಲೀಸ್ ಆಯುಕ್ತರುಗಳೂ ಸಹ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮೊಬೈಲ್ ಗಸ್ತಿನಲ್ಲಿ ಇದ್ದು, ಭದ್ರತಾ ವ್ಯವಸ್ಥೆಯ ಉಸ್ತುವಾರಿಯನ್ನು ನೋಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಇದಲ್ಲದೆ, ನಗರ ಸಶಸ್ತ್ರ ಮೀಸಲು ಪಡೆ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕರ್ನಾಟಕ ರಾಜ್ಯ ಮೀಸಲು ಪಡೆಯ 127 ತುಕಡಿಗಳನ್ನು ಸ್ಥಳೀಯ ಪೊಲೀಸರ ಸಹಾಯಕರಾಗಿ ನೇಮಿಸಲಾಗಿದೆ.

ಮುಷ್ಕರ ಸಮಯದಲ್ಲಿ ಯಾವುದೇ ಪ್ರತಿಭಟನೆ, ಸಭೆ ಮತ್ತು ಮೆರವಣಿಗೆ ನಡೆಸಲು ಕಾನೂನು ರೀತಿಯ ಅವಕಾಶ ಇರುವುದಿಲ್ಲ. ಮುಷ್ಕರ ಸಮಯದಲ್ಲಿ ತುರ್ತು ಸೇವೆಗಳಾದ ಆಂಬ್ಯುಲೆನ್ಸ್, ಔಷಧಿ, ಆಸ್ಪತ್ರೆ, ಹಾಲು ಪೂರೈಕೆ ಹಾಗೂ ಇನ್ನಿತರೆ ಅಗತ್ಯ ಸೇವೆಗಳಿಗೆ ಅಡ್ಡಿ ಉಂಟು ಮಾಡಲು ಅವಕಾಶ ನೀಡುವುದಿಲ್ಲ. ಒಂದು ವೇಳೆ ಬಲವಂತವಾಗಿ ಅಗತ್ಯ ಸೇವೆಗಳಿಗೆ ಅಡ್ಡಿಪಡಿಸಿದಲ್ಲಿ, ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಎಲ್ಲಾ ಪೋಲೀಸ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ.

ಈ ಸಮಯದಲ್ಲಿ ಜನರು ಶಾಂತಿಯುತವಾಗಿ ಪೊಲೀಸರೊಂದಿಗೆ ಸಹಕಾರ ನೀಡಲು ಪೋಲೀಸ್ ಇಲಾಖೆಯು ಅಪೇಕ್ಷಿಸುತ್ತದೆ ಎಂದಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: