ಪ್ರಮುಖ ಸುದ್ದಿಮೈಸೂರು

ಜ.11ರಿಂದ ರಾಜ್ಯಮಟ್ಟದ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆ

ಮೈಸೂರು,ಜ.8 : ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ, ಹನಿವೆಲ್ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ರಾಜ್ಯಮಟ್ಟದ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಯನ್ನು ಜ.11, 12ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಪ್ರತಿಷ್ಠಾನದ ಯೋಜನಾಧಿಕಾರಿ ಸುಬ್ರಹ್ಮಣ್ಯ ನಾಯ್ಕ್ ತಿಳಿಸಿದರು.

ಜ.11ರ ಬೆಳಗ್ಗೆ 10 ಗಂಟೆಗೆ ಸಂಸದ ಜೆ.ಡಿ.ಮಾದೇಗೌಡ ಸ್ಪರ್ಧೆಗೆ ಚಾಲನೆ ನೀಡಲಿದ್ದು, ಹನಿವೆಲ್ ಸಂಸ್ಥೆಯ ಸಂಗೀತಾ, ಅಗಸ್ತ್ಯ ಪ್ರತಿಷ್ಠಾನದ ಸಾಯಿ ಚಂದ್ರಶೇಖರ್, ಬಳ್ಳಾರಿ ಕೃಷ್ಣದೇವರಾಯ ವಿವಿಯ ವಿಶ್ರಾಂತ ಕುಲಪತಿ ಸೋಮಶೇಖರ್, ಸಿಎಫ್ ಟಿ.ಆರ್.ಐ ವಿಜ್ಞಾನಿ ಕೊಳ್ಳೇಗಾಲ ಶರ್ಮಾ ಇವರುಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು

ಮಕ್ಕಳಲ್ಲಿ ಕ್ರಿಯಾಶೀಲತೆ ಮತ್ತು ಸೃಜನಾತ್ಮಕತೆ ಅಭಿವೃದ್ಧಿಪಡಿಸಿ ವೈಜ್ಞಾನಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ಬೆಳೆಸಿ ಸ್ವಯಂ ಪ್ರಯೋಗಕ್ಕೆ ಪ್ರೇರೇಪಿಸುವ ನಿಟ್ಟಿನಲ್ಲಿ  ಪ್ರತಿಷ್ಠಾನವು ಕಾರ್ಯ ನಿರ್ವಹಿಸುತ್ತಿದ್ದು ಈ ನಿಟ್ಟಿನಲ್ಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ 652 ಪ್ರಾಥಮಿಕ ಹಾಗೂ 413 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಯೋಜನೆಗಳನ್ನು ಸಲ್ಲಿಸಿದ್ದರು. ಅದರಲ್ಲಿ ಅತ್ಯುತ್ತಮ 30 ಪ್ರಾಜೆಕ್ಟ್ ಗಳನ್ನು ಅಂತಿಮ ಸುತ್ತಿಗೆ ಆಯ್ಕೆಗೊಳಿಸಲಾಗಿದೆ ಎಂದರು.

ಪ್ರತಿ ಮಾದರಿಗೂ ಇಬ್ಬರು ವಿದ್ಯಾರ್ಥಿಗಳು, ಒಬ್ಬ ಶಿಕ್ಷಕರಿಗೆ ಅವಕಾಶವಿದೆ. ಸಂಸ್ಥೆ ವತಿಯಿಂದ ಪ್ರಯಾಣ ಭತ್ಯೆ, ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಿದೆ. ಕೊಡಗು, ಚಾಮರಾಜನಗರ, ಮಂಗಳೂರು, ಉತ್ತರಕನ್ನಡ, ಚಿಕ್ಕಮಗಳೂರು, ಬೆಂಗಳೂರು, ಹಾಸನ, ಉಡುಪಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಲವಾರು ಜಿಲ್ಲೆಗಳ ತಂಡಗಳು ಭಾಗಿಯಾಗುತ್ತಿವೆ.  ವಿಜೇತ ತಂಡಗಳಿಗೆ ರೂ.20, ರೂ. 10, ರೂ.5 ಸಾವಿರ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಗೆ, ಸಮಧಾನಕರವಾಗಿ 3 ಸಾವಿರ ರೂಗಳ ನಗದು ಹಾಗೂ ಪ್ರಶಸ್ತಿ ಫಲಕ ನೀಡಲಾಗುತ್ತಿದೆ ಎಂದು ತಿಳಿಸಿದರು.

ನವೀನ್ ಕುಮಾರ್, ಎನ್. ಪ್ರದೀಪ್, ಸತೀಶ್ ಮೊದಲಾದವರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: