ದೇಶಪ್ರಮುಖ ಸುದ್ದಿ

ಸಿಬಿಐ ವಿವಾದದಲ್ಲಿ ಸರ್ಕಾರಕ್ಕೆ ತೀವ್ರ ಹಿನ್ನಡೆ: ಸುಪ್ರೀಂಕೋರ್ಟ್ ಹೇಳಿದ್ದೇನು?

ನವದೆಹಲಿ (ಜ.8): ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದ್ದ ನಿರ್ಧಾರವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಅಲ್ಲದೆ, ವರ್ಮಾ ಅವರನ್ನು ನಿರ್ದೇಶಕರ ಸ್ಥಾನಕ್ಕೆ ಮರಳಿ ಕಳುಹಿಸುವಂತೆ ಮಂಗಳವಾರ ನೀಡಿದ ತೀರ್ಪಿನಲ್ಲಿ ಹೇಳಿದೆ.

ಈ ತೀರ್ಪಿನಿಂದಾಗಿ, ಸಿಬಿಐ ನಿರ್ದೇಶಕರು ಮತ್ತು ವಿಶೇಷ ನಿರ್ದೇಶಕರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ರಾತ್ರೋ ರಾತ್ರಿ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್‌ನಲ್ಲಿ ಭಾರಿ ಮುಖಭಂಗ ಅನುಭವಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಗೈರು ಹಾಜರಿಯಲ್ಲಿ ನ್ಯಾಯಮೂರ್ತಿ ಎಸ್ ಕೆ ಕೌಲ್ ತೀರ್ಪು ಪ್ರಕಟಿಸಿದರು. ಈ ಪ್ರಕರಣವು ಸಿಬಿಐ ನಿರ್ದೇಶಕರ ಅಧಿಕಾರವನ್ನು ಮೊಟಕುಗೊಳಿಸಲು ಸರ್ಕಾರಕ್ಕೆ ಕಾನೂನಾತ್ಮಕ ಅಧಿಕಾರವಿದೆಯೇ ಅಥವಾ ಇಲ್ಲವೇ ಎಂಬುದರ ಸ್ಪಷ್ಟ ಪ್ರಶ್ನೆಯಾಗಿದೆ ಎಂದು ಎಂದು ಕೌಲ್ ಹೇಳಿದರು.

1997ರಲ್ಲಿ ಸಿಬಿಐ ನಿರ್ದೇಶಕರಾಗಿದ್ದ ವಿನೀತ್ ನಾರಾಯಣ್ ಎರಡು ವರ್ಷದ ಅಧಿಕಾರಾವಧಿಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಆದರೆ, ಆ ಪ್ರಕರಣದ ತೀರ್ಪನ್ನು ಇದಕ್ಕೆ ಅನ್ವಯಿಸಲು ಆಗುವುದಿಲ್ಲ ಎಂದು ಕೋರ್ಟ್ ಹೇಳಿತು. ಅಲೋಕ್ ವರ್ಮಾ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಸಾಧ್ಯವಿಲ್ಲ. ಅವರನ್ನು ಮರಳಿ ಆ ಸ್ಥಾನಕ್ಕೆ ನೇಮಿಸಬೇಕು. ಆದರೆ ಅವರು ಸಿಬಿಐ ನಿರ್ದೇಶಕರ ಆಯ್ಕೆ ಸಮಿತಿಯು ನಿರ್ಧಾರ ತೆಗೆದುಕೊಳ್ಳುವವರೆಗೂ ವರ್ಮಾ ಅವರು ಸಿಬಿಐ ಮುಖ್ಯಸ್ಥರಾಗಿ ಯಾವುದೇ ಪ್ರಮುಖ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು.

ಸಿಬಿಐ ನಿರ್ದೇಶಕರ ವಿರುದ್ಧ ಮಧ್ಯಂತರ ಕ್ರಮಗಳನ್ನು ತೆಗೆದುಕೊಳ್ಳಲು ಅನುಮತಿ ಇದೆಯೇ ಎಂಬುದನ್ನು ಕಾನೂನು ಪರಿಶೀಲಿಸಲಿದೆ. ‘ವರ್ಗಾವಣೆ’ ಎಂಬ ಪದಕ್ಕೆ ಅದರ ಸಾಮಾನ್ಯ ಅರ್ಥವನ್ನು ನೀಡಲು ಸಾಧ್ಯವಿಲ್ಲ. ಇದರಿಂದ ಸಿಬಿಐ ನಿರ್ದೆಶಕರ ಕಾರ್ಯ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಅಲೋಕ್ ವರ್ಮಾ ಅವರನ್ನು ರಜೆ ಮೇಲೆ ಕಳುಹಿಸುವ ಕೇಂದ್ರ ವಿಚಕ್ಷಣಾ ಆಯೋಗ (ಸಿವಿಸಿ) ಮತ್ತು ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯ (ಡಿಒಪಿಟಿ) ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತು. ಡಿಎಸ್‌ಪಿಇ ಕಾಯ್ದೆಯಡಿ ರಚಿಸಲಾದ ಉನ್ನತ ಅಧಿಕಾರದ ಸಮಿತಿ ಒಂದು ವಾರದ ಒಳಗೆ ವರ್ಮಾ ಅವರ ಪ್ರಕರಣವನ್ನು ಪರಿಗಣಿಸಬೇಕು. ಅಲ್ಲಿಯವರೆಗೂ ವರ್ಮಾ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ. ಸಿಬಿಐ ನಿರ್ದೇಶಕರು ಸಂಸ್ಥೆಯ ಸ್ವಾತಂತ್ರ್ಯಕ್ಕೆ ಮಾದರಿಯಾಗಿರಬೇಕು. ಸಿಬಿಐನ ಸ್ವಾಯತ್ತತೆಗೆ ಸಾರ್ವಜನಿಕ ಹಿತಾಸಕ್ತಿ ಅತಿ ಮುಖ್ಯವಾಗಿರುತ್ತದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ. (ಎನ್.ಬಿ)

Leave a Reply

comments

Related Articles

error: