ದೇಶಪ್ರಮುಖ ಸುದ್ದಿ

ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಭೇಟಿ ಮಾಡಿದ ಜಪಾನ್ ವಿದೇಶಾಂಗ ಸಚಿವ ತಾರೋ ಕೋನೋ

ದೇಶ(ನವದೆಹಲಿ)ಜ.8:-  ಜಪಾನ್ ವಿದೇಶಾಂಗ ಸಚಿವ ತಾರೋ ಕೋನೋ ಅವರು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಭೇಟಿ ಮಾಡಿದರು.

ತಮ್ಮ ನಿಯೋಗದ ಸದಸ್ಯರ ಸಹಿತ ಉಭಯ ನಾಯಕರೂ ಪರಸ್ಪರ ಮಾತುಕತೆ ನಡೆಸಿದರು ಎಂದು ತಿಳಿದು ಬಂದಿದೆ. ಸಭೆಯಲ್ಲಿ ಪ್ರಸ್ತಾಪವಾದ ವಿಷಯಗಳ ಕುರಿತು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರವೀಶ್‌ಕುಮಾರ್ ಟ್ವೀಟ್ ಮಾಡಿದ್ದು, ಉಭಯ ದೇಶಗಳ ನಡುವೆ ವಿಶೇಷ ರಾಜತಾಂತ್ರಿಕ ಹಾಗೂ ಜಾಗತಿಕ ಪಾಲುದಾರಿಕೆಯ ಚಿಗುರು ಆಳವಾಗಿ ಬೇರು ಮಟ್ಟದಲ್ಲಿ ಬೆಸೆದುಕೊಂಡಿದೆ ಎಂದು ಬಣ್ಣಿಸಿದ್ದಾರೆ.

ಎರಡೂ ರಾಷ್ಟ್ರಗಳ ನಡುವಣ 10ನೇ ರಾಜತಾಂತ್ರಿಕ ಮಾತುಕತೆಗಾಗಿ ಜಪಾನ್ ವಿದೇಶಾಂಗ ಸಚಿವರನ್ನು ಸುಷ್ಮಾ ಸ್ವರಾಜ್‌ರವರು ಹಾರ್ದಿಕವಾಗಿ ಸ್ವಾಗತಿಸಿದರು. ಕಳೆದ ಮಾರ್ಚ್‌ನಲ್ಲಿ ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾರವರು ಜಪಾನ್‌ಗೆ ಭೇಟಿ ನೀಡಿದ್ದರು ಎಂದು ರವೀಶ್ ತಿಳಿಸಿದ್ದಾರೆ.

ಈ ಮಧ್ಯೆ, ಆಸ್ಟ್ರೇಲಿಯಾ ವಿದೇಶಾಂಗ ಸಚಿವೆ ಮರಿಸೆ ಪೈನೆ ಅವರೂ ಸಹ ದೆಹಲಿಗೆ ಆಗಮಿಸಿದ್ದಾರೆ. 2 ದಿನಗಳ ಭೇಟಿಗಾಗಿ ಅವರು ಭಾರತಕ್ಕೆ ಬಂದಿದ್ದಾರೆ.

ಇಂದು ಬೆಳಿಗ್ಗೆ ಜಪಾನ್ ವಿದೇಶಾಂಗ ಸಚಿವ ಕೋನೋ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನೂ ಭೇಟಿ ಮಾಡಿ, ಕಳೆದ ಅಕ್ಟೋಬರ್‌ನಲ್ಲಿ ಜಪಾನ್‌ನಲ್ಲಿ ನಡೆದಿದ್ದ ಭಾರತ- ಜಪಾನ್ ನಡುವಣ 13ನೇ ವಾರ್ಷಿಕ ಶೃಂಗಸಭೆಯ ನಂತರ ಕೈಗೊಳ್ಳಲಾದ ಕ್ರಮಗಳ ಕುರಿತು ವಿವರಣೆ ನೀಡಿದರು ಎಂದೂ ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: