
ಕರ್ನಾಟಕ
ಅಬಕಾರಿ ದಾಳಿ : ಅಕ್ರಮ ಮದ್ಯ ವಶ
ಹಾಸನ (ಜ.9): ಹಾಸನ ಅಬಕಾರಿ ಉಪ ಆಯುಕ್ತರ ಕಚೇರಿ, ಅಬಕಾರಿ ಉಪ ನಿರೀಕ್ಷಕರು, ಹಾಗೂ ಸಿಬ್ಬಂದಿಗಳು ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ ಸಕಲೇಶಪುರ ತಾಲ್ಲೂಕು, ಅಗನಿ ಗ್ರಾಮದಲ್ಲಿರುವ ಕಾಡುಮಕ್ಕಿ ರೆಸಾರ್ಟ್ನ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು.
ರೆಸಾರ್ಟ್ನ ಕೊಠಡಿಯಲ್ಲಿ ಬಂದಂತಹ ಅತಿಥಿಗಳಿಗೆ ನೀಡಲು ಅಕ್ರಮವಾಗಿ ಮತ್ತು ಅವೈಜ್ಞಾನಿಕವಾಗಿ ತಯಾರಿಸಿದ ತಲಾ 750 ಮಿಲಿ ಲೀಟರ್ ಗಾಜಿನ ಬಾಟಲಿಗಳಲ್ಲಿ ಲೇಬಲ್ಗಳನ್ನು ಕಿತ್ತು ಅವುಗಳಿಗೆ ಕೈಯಲ್ಲಿ ಬರೆದು ದ್ರಾಕ್ಷಿ ವೈನ್, ದಾಳಿಂಬೆ ವೈನ್, ವಿಳ್ಳೆದೆಲೆ ವೈನ್ ಮತ್ತು ವಿವಿಧ ರೀತಿಯ ಹೆಸರುಗಳನ್ನು ಬರೆದು ಅಂಟಿಸಿ ಘಾಟು ವಾಸನೆಯಿಂದ ಕೂಡಿದ ಮದ್ಯದಂತಹ ರಸವನ್ನು ತುಂಬಿ ಶೇಖರಿಸಿಟ್ಟಿದ್ದರು.
ಈ ಮದ್ಯವನ್ನು ವಶಪಡಿಸಿಕೊಂಡು ರೆಸಾರ್ಟ್ನ ಮಾಲೀಕರು ಹಾಗೂ ಮೇಲ್ವಿಚಾರಕರಾದ ರೋಹಿತ್ ಕುಮಾರ್ ಎ.ಆರ್. ಬಿನ್ ರೇವಪ್ಪ ಎ.ಎಸ್. ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿರುತ್ತದೆ. ಆರೋಪಿಗಳು ಪರಾರಿಯಾಗಿದ್ದು ತನಿಖೆಯನ್ನು ಮುಂದುವರೆಸಲಾಗಿದೆ. ಮತ್ತು ದಾಳಿಯಲ್ಲಿ ಒಟ್ಟು ತಲಾ 750 ಮಿಲಿ ಲೀಟರ್ ಸಾಮರ್ಥ್ಯದ ಒಟ್ಟು 30 ಬಾಟಲಿಗಳಲ್ಲಿ ಅಕ್ರಮ ಮದ್ಯ ದೊರೆತಿದೆ.
ಅನಧಿಕೃತವಾಗಿ ತಯಾರಿಸಿ ಮಾರಾಟ ಮಾಡುವ ಮದ್ಯ ಅಥವಾ ವೈನ್ ಬಳಕೆ ಮಾಡುವುದರಿಂದ ದುರಂತಗಳು ಸಂಭವಿಸುವ ಸಾಧ್ಯತೆಗಳಿರುವುದರಿಂದ ಸಾರ್ವಜನಿಕರು ಇಂತಹ ಮದ್ಯ ಸೇವನೆ ಮಾಡಬಾರದಾಗಿ ಎಂದು ಡೆಪ್ಯೊಟಿ ಕಮಿನಷರ್ ಆಫ್ ಎಕ್ಸೆಸ್ ಕೋರಿದ್ದಾರೆ. (ಎನ್.ಬಿ)