ಕರ್ನಾಟಕಮೈಸೂರು

ದೇವರ ಹೆಸರಲ್ಲಿ ನಡೆಯುವ ಡಂಬಾಚಾರಗಳನ್ನು ವಿರೋಧಿಸಬೇಕು: ಬಿ.ಆರ್. ರಂಗಸ್ವಾಮಿ

ಮಾನಸಗಂಗೋತ್ರಿ: ನವಸಮಾಜ ನಿರ್ಮಾಣ ವೇದಿಕೆ, ಮಾನವ ಬಂಧುತ್ವ ವೇದಿಕೆ, ಯುವಪರ ಪ್ರಗತಿಪರ ಚಿಂತಕರ ಸಂಘ, ಮಾನಸಗಂಗೋತ್ರಿ, ದಲಿತ ಸಂಘರ್ಷ ಸಮಿತಿ ಇವರ ಸಹಯೋಗದೊಂದಿಗೆ ಪೆರಿಯಾರ್ ರಾಮಸ್ವಾಮಿ ಅವರ 137ನೇ ಜಯಂತಿಯ ಪ್ರಯುಕ್ತ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಮೌಢ್ಯ ನಿರ್ಮೂಲನಾ ದಿನಾಚರಣೆ ಹಾಗೂ ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬಿ.ಆರ್. ರಂಗಸ್ವಾಮಿ ಅವರ ಪೆರಿಯಾರ್ ಸಂಪುಟದ ಕುರಿತು ಪುಸ್ತಕ ಬಿಡುಗಡೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿ.ಆರ್. ರಂಗಸ್ವಾಮಿ ಅವರು ಮಾತನಾಡುತ್ತಾ, ಪೆರಿಯಾರ್‍ ವಿಚಾರಧಾರೆಗಳನ್ನು ಕಡೆಗಣಿಸಿದರೆ ನಮ್ಮ ಉಳಿವು ಸಾಧ‍್ಯವಿಲ್ಲ. ಮೌಢ್ಯದ ವಿರುದ್ಧ ಜಾಗೃತಿ ಕಾರ್ಯಗಳು ನಡೆಯಬೇಕಿವೆ ಎಂದು ಹೇಳಿದರು.

‘ದೇವರು, ಧರ್ಮ ಮತ್ತು ಜೀವವಿರೋಧಿ ನಂಬಿಕೆಗಳು’ – ವಿಷಯದ ಬಗ್ಗೆ ಅಖಿಲ ಭಾರತ ವಿಚಾರವಾದಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಪ್ರೊ. ನರೇಂದ್ರ ನಾಯಕ್ ವಿಷಯ ಮಂಡನೆ ಮಾಡಿದರು. ಸಮಾಜದಲ್ಲಿ ಶೋಷಣೆ ಮತ್ತು ವ್ಯವಸ್ಥೆಯ ವಿರುದ್ಧ ನಡೆಯುತ್ತಿರುವ ಕಾರ್ಯಗಳನ್ನು ದಮನಿಸುವ ಕೆಲಸ ನಡೆಯುತ್ತಿದೆ. ದೇವರು, ಧರ್ಮ, ಜಾತಿ, ಮತಗಳ ಹೆಸರಲ್ಲಿ ನಡೆಯುತ್ತಿರುವ ಅನ್ಯಾಯ, ಶೋಷಣೆಗಳು ಮಾನವರನ್ನು ದಾನವರನ್ನಾಗಿ ಮಾಡುತ್ತಿವೆ. ಆದ್ದರಿಂದ ಇಂದು ನಾವು ಇದನ್ನು ತಡೆಯುವ ಕೆಲಸ ಮಾಡಬೇಕಿದೆ ಎಂದು ಹೇಳಿದರು. ಅಲ್ಲದೇ ಮೂರ್ತಿಪೂಜೆಯನ್ನು ವಿರೋಧಿಸುತ್ತಾ, ದೇವರ ಹೆಸರಿನಲ್ಲಿ ಡಂಬಾಚಾರ ಮಾಡುತ್ತಿರುವ ಪುರೋಹಿತಶಾಹಿ ವರ್ಗವು ದೆವರು ಮತ್ತು ಮನುಷ್ಯರ ನಡುವೆ ಗೋಡೆಯನ್ನು ನಿರ್ಮಿಸುತ್ತಿದೆ ಎಂದರು.

ಆಹಾರ ಪದ್ಧತಿಯ ಬಗ್ಗೆಯೂ ಸಹ ಅವರ ವಾದ ಮಂಡನೆ ಸಾಗಿತ್ತು. ಇಂದಿನ ದಿನಗಳಲ್ಲಿ ಸಸ್ಯಾಹಾರಿಗಳು ಮಾಂಸಾಹಾರಿಗಳನ್ನು ಕೀಳಾಗಿ ನೋಡುವ ಗೀಳು ಹೆಚ್ಚಾಗಿದೆ. ಆಹಾರ ಪದ್ಧತಿಗಳ ಕುರಿತು ಅಸಹನೆ ಭಾವ ಬರುವಂತೆ ಮಾಡುತ್ತಿದ್ದಾರೆ ಎಂದು ದೂಷಿಸಿದರು.

ಜಾತಿ ಪದ್ಧತಿಯು ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿದೆ. ಹಳೇ ಮೌಢ್ಯಗಳು ಮರೆಯಾಗುವ ಹೊತ್ತಿಗೆ ಹೊಸಹೊಸ ಮೌಢ್ಯಗಳ ಉಗಮವಾಗುತ್ತಿರುವುದು ಸಮಾಜ ಹಿತದೃಷ್ಟಿಯಿಂದ ಅನಾರೋಗ್ಯಕರ ಬೆಳವಣಿಗೆ ಎಂದು ಬೇಸರ ವ್ಯಕ್ತಪಡಿಸಿದರು.

ಮೊದಲು ಮಾನವ ವಿರೋಧಿ ಮೌಲ್ಯಗಳನ್ನು ವಿರೋಧಿಸಬೇಕು.  ಮಡೆಸ್ನಾನ, ಅಸ್ಪೃಶ್ಯತೆ, ಮೂಢನಂಬಿಕೆಗಳನ್ನು ಕಿತ್ತೆಸೆಯುವ ಕಾರ್ಯಗಳು ನಡೆಯಬೇಕಿವೆ. ಆದ್ದರಿಂದ ಪೆರಿಯಾರ್ ಚಿಂತನೆಗಳನ್ನು, ವೈಚಾರಿಕತೆಯನ್ನು ಅನುಸರಿಸಿ, ಅಳವಡಿಸಿಕೊಳ್ಳಿ ಎಂದು ಸಂದೇಶ ನೀಡಿದರು.

ನಂತರ ಪ್ರಗತಿಪರ ಚಿಂತಕ ಮತ್ತು ಲೇಖಕ ನಾ.ದಿವಾಕರ ಅವರು ಪೆರಿಯಾರ್ ಚಿಂತನೆಗಳನ್ನು ಪುನರುಜ್ಜೀವನಗೊಳಿಸಬೇಕಿದೆ. ತಂತ್ರಜ್ಞಾನ, ಜಾತಿ ಮತ್ತು ಧರ್ಮದ ನೆಲೆಯಲ್ಲಿ ಉಂಟಾಗುತ್ತಿರುವ ಮೂಢನಂಬಿಕೆಗಳನ್ನು ಇಂದು ಪ್ರಶ್ನಿಸಬೇಕಿದೆ. ಇಂದಿನ ತಂತ್ರಜ್ಞಾನ ವಾಟ್ಸಾಪ್, ಅಂತರ್ಜಾಲದಲ್ಲಿರುವುದೆಲ್ಲವೂ ಸತ್ಯ ಎಂದು ನಂಬುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನಾವು ಮಕ್ಕಳಿಗೆ ಪ್ರಾಥಮಿಕ ಮಟ್ಟದಿಂದಲೇ ವೈಚಾರಿಕ ವೈಜ್ಞಾನಿಕ ಚಿಂತನೆಗಳನ್ನು ತಿಳಿಸಿ ಬೆಳೆಸುವ ಮೂಸಲಕ ಮೌಢ‍್ಯಮುಕ್ತ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಎಚ್.ಆರ್. ಸ್ವಾಮಿ ಅವರು, ಪೆರಿಯಾರ್ ಅವರ ತ್ಯಾಗ ಬಲಿದಾನಗಳ ಬಗ್ಗೆ ಹೇಳುತ್ತಾ, ಅವರಿಗಿದ್ದ ವೈಚಾರಿಕ ಮನೋಭಾವವನ್ನು ಕುರಿತು ಹೇಳಿದರು. ಪುರೋಹಿತಶಾಹಿಯ ಮೌಢ್ಯತ್ವವನ್ನು ಪ್ರಶ್ನಿಸಿ, ವೈಜ್ಞಾನಿಕ ನೆಲೆಗಟ್ಟಿಗೆ ಪ್ರಾಮುಖ್ಯತೆ ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪಿಯುಸಿಎಲ್‍ನ  ಡಾ. ವಿ. ಲಕ್ಷ್ಮೀನಾರಾಯಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ದಲಿತ ಮುಖಂಡ ಬೆಟ್ಟಯ್ಯ ಕೋಟೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ವಿಲ್ಫ್ರೆಡ್ ಡಿ`ಸೋಜಾ ಮತ್ತಿತರರು ಹಾಜರಿದ್ದರು. ಇನ್ನುಳಿದಂತೆ ಡಾ.ಅನಸೂಯ ಕೆಂಪನಹಳ್ಳಿ, ಜೀರಹಳ್ಳಿ ರಮೇಶ್ ಗೌಡ, ಟಿ. ಸತೀಶ್ ಜವರೇಗೌಡ, ಪದ್ಮಶ್ರೀ ಟಿ.ಎಂ. ಲೋಕೇಶ್, ಡಾ.ಎಸ್. ನರೇಂದ್ರಕುಮಾರ್, ಕೆ.ಎಸ್. ಸತೀಶ್ ಕುಮಾರ್, ಈ. ಧನಂಜಯ ಎಲಿಯೂರು, ಡಾ. ಚಂದ್ರಗುಪ್ತ, ಡಾ. ಕುಶಾಲ ಬರಗೂರು ಉಪಸ್ಥಿತರಿದ್ದರು.

Leave a Reply

comments

Related Articles

error: