ಮೈಸೂರು

ಸಂಸ್ಕೃತ ಭಾಷೆಯಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ : ಪ್ರೊ.ಟಿ.ಎನ್.ಪ್ರಭಾಕರ್

ಮೈಸೂರು ನಗರದ ಬಿ.ಎನ್. ರಸ್ತೆಯಲ್ಲಿರುವ ಜೆ.ಎಸ್‍.ಎಸ್ ಪದವಿ ಮತ್ತು ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ಸಂಸ್ಕೃತೋತ್ಸವ ಜರುಗಿತು.

ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ  ಅಪರ ನಿರ್ದೇಶಕ ಪ್ರೊ. ಟಿ.ಎನ್. ಪ್ರಭಾಕರ್ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪಾಶ್ಚಾತ್ಯ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಹೊರತುಪಡಿಸಿ ಭಾರತೀಯ ಸನಾತನ ಸಂಸ್ಕೃತಿಯ ವೇದ, ಉಪನಿಷತ್, ರಾಮಾಯಣ, ಮಹಾಭಾರತಗಳಲ್ಲಿ ಇರುವಂತಹ ಜ್ಞಾನ ಅಪಾರವಾದುದು. ಭಾರತ ಎಂದರೆ ಸಂಸ್ಕೃತ ಎಂದು ಗೌರವಿಸುವ ಕಾಲವೊಂದಿತ್ತು. ಮೆಕಾಲೆ ಮುಂತಾದವರು ವಿದೇಶಿ ಶಿಕ್ಷಣವನ್ನು ಜಾರಿ ಮಾಡಿ ನಮ್ಮಲ್ಲಿರುವಂತಹ ಅಪಾರ ಜ್ಞಾನ ಸಂಪತ್ತನ್ನು ಕಡೆಗಣಿಸಿದರು. ಆದರೆ ಇಂದು ವಿದೇಶಿಯರು ವೇದೋಪನಿಷತ್ತಿನ ಜ್ಞಾನ ಹಾಗೂ ಯೋಗಾಭ್ಯಾಸದಲ್ಲಿ ತೊಡಗಿದ್ದಾರೆ. ಸರ್ವೇ ಭವಂತು ಸುಖೀನಾಃ ಸರ್ವೇ ಸಂತು ನಿರಾಮಯಾಃ ಸರ್ವೇ ಭದ್ರಾಣಿ ಪಶ್ಯಂತು, ಮಾ ಕಶ್ಚಿದ್ ದುಃಖಭಾಗ್ ಭವೇತ್. ಇದರ ಅರ್ಥ ಎಲ್ಲರೂ ಸುಖದಿಂದ ಇರಲಿ. ಎಲ್ಲರೂ ಆರೋಗ್ಯವಂತರಾಗಿ ಬಾಳಲಿ, ಎಲ್ಲರೂ ಒಳ್ಳೆಯದನ್ನೇ ನೋಡಲಿ, ಯಾರೋಬ್ಬರು ದುಃಖಕ್ಕೆ ಒಳಗಾಗಬಾರದು ಎಂದು ವಿವರಿಸಿದರು.

ಪ್ರಾಚೀನ ಕಾಲದಲ್ಲಿ ವೇದೋಪನಿಷತ್ತಿನಲ್ಲಿ ಆಧಾರಿತವಾದ ವಿಚಾರಧಾರೆಗಳನ್ನು ಮಕ್ಕಳಿಗೆ ತಿಳಿಸಿಕೊಡುವ ವ್ಯವಸ್ಥೆಯಿತ್ತು. ಸಮಾಜದ ಹಿತವೇ ನಮ್ಮ ಹಿತ ಹಾಗೂ ವಿಕಾಸ ಎನ್ನುವ “ವಸುದೈವ ಕುಟುಂಬಕಂ” ಎನ್ನುವ ಭಾವನೆ ಭಾರತೀಯರೆಲ್ಲರಲ್ಲಿಯೂ  ಇತ್ತು. ದೇಶದ ಪ್ರತಿಯೊಬ್ಬರಿಗೂ ಸಂಸ್ಕೃತ ಭಾಷೆಯನ್ನು ಪರಿಚಯಿಸುವ ಕಾಲ ಬಂದಿದೆ. ಸಂಸ್ಕೃತ ಭಾಷೆಯಿಂದ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ. ಸಂಸ್ಕೃತಾಧ್ಯಯನ ಮಾಡಿದವರಲ್ಲಿ ಶಾಂತಿ, ನೆಮ್ಮದಿ, ಸುವ್ಯವಸ್ಥಿತವಾದ ಜೀವನವನ್ನು ಕಾಣಬಹುದು. ಸಂಸ್ಕೃತ ಶಿಬಿರಗಳ ಮುಖಾಂತರ ಸಂಸ್ಕೃತ ಎಲ್ಲರ ಮನೆಮಾತಾಗಬೇಕು ಎಂದು ಕರೆ ನೀಡಿದರು.

ವಿದ್ವಾನ್ ಡಾ. ವೆಂಕಟರಮಣ ಹೆಗಡೆ ಮಾತನಾಡಿ ಆ್ಯಡಂಸ್ಮಿತ್‍ಗಿಂತ ಮೊದಲೇ ಇದ್ದಂತಹ ಕೌಟಿಲ್ಯನ ವಿಚಾರವನ್ನು ಯಾರು ತಿಳಿದುಕೊಳ್ಳಲು ಪ್ರಯತ್ನಿಸಿರಲಿಲ್ಲ. ಕೌಟಿಲ್ಯನ ವಿಚಾರಗಳನ್ನು ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರವನ್ನು ಅಧ್ಯಯನ ಮಾಡುವವರು ತಿಳಿದಿರಬೇಕು.  ರಾಷ್ಟ್ರದಲ್ಲಿಯೇ ಮಹತ್ವದ ಸ್ಥಾನವನ್ನು ಹೊಂದಿರುವಂತಹ ಕೃಷಿ, ಪಶುಪಾಲನೆ ಮತ್ತು ವಾಣಿಜ್ಯ ವ್ಯಾಪಾರಗಳಿಗೆ ಕೌಟಿಲ್ಯನ ಅರ್ಥಶಾಸ್ತ್ರವು ಮಹತ್ವದ ಸ್ಥಾನವನ್ನು ಕೊಟ್ಟಿದೆ. ಆದಕಾರಣ ಅರ್ಥಶಾಸ್ತ್ರದ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ. ಸಾಂಬಶಿವಯ್ಯ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಮಹದೇವಪ್ಪ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲಎಸ್. ಸೋಮಶೇಖರ ಅವರು ಉಪಸ್ಥಿತರಿದ್ದರು.

Leave a Reply

comments

Related Articles

error: