ಪ್ರಮುಖ ಸುದ್ದಿ

ಭಾರತ್ ಬಂದ್ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗಳ ಮೇಲೆ ಕಿಡಿಗೇಡಿಗಳ ಕಲ್ಲು ತೂರಾಟ

ರಾಜ್ಯ(ಬೆಂಗಳೂರು)ಜ.9:- ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಬೆಂಗಳೂರಿನ ಚಿಕ್ಕಜಾಲ ಬಳಿ ವಾಯುವಜ್ರ ಬಸ್ ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.  ಖಾಸಗಿ ಭದ್ರತೆಯಲ್ಲಿ ತೆರಳುತ್ತಿದ್ದ ನಾಲ್ಕು ವಾಯುವಜ್ರ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದು ಗಾಜುಗಳು ಪುಡಿಪುಡಿಯಾಗಿದೆ. ಹಾಗೆಯೇ ಇನ್ನೊಂದೆಡೆ  ಬಿಡದಿ ಕಡೆಗೆ ತೆರಳುತ್ತಿದ್ದ ಎರಡು ಬಿಎಂಟಿಸಿ ಬಸ್ ಗಳ ಮೇಲೆ  ರಾಮೋಹಳ್ಳಿ ಗೇಟ್ ಬಳಿ ಕಲ್ಲು ತೂರಾಟ ನಡೆದಿದೆ.

ಬಿಎಂಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು ಸಂಚಾರ ಪ್ರಾರಂಭಿಸುವಂತೆ ಪ್ರಯಾಣಿಕರು ಬಿಎಂಟಿಸಿ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದ ಘಟನೆ ನಡೆದಿದೆ. ರಾಯಚೂರಿನಲ್ಲಿ ದಿಢೀರ್ ಬಸ್ ಸಂಚಾರ ಸ್ಥಗಿತಗೊಂಡಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ.

ಈ ಮಧ್ಯೆ ಧಾರವಾಡ ಬಾಗಲಕೋಟೆ ಜಿಲ್ಲೆಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಲ್ಬುರ್ಗಿಯಲ್ಲಿ ಪ್ರತಿಭಟನಾಕಾರರು  ಡಿಸಿ ಕಚೇರಿ ಬಳಿ ಧರಣಿ ನಡೆಸುತ್ತಿದ್ದಾರೆ.  ಬಳ್ಳಾರಿ ಜಿಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಬಂದ್ ವೇಳೆ ನಾಲ್ಕು ಸಾರಿಗೆ ಬಸ್ ಗಳಿಗೆ ಕಲ್ಲು ತೂರಿದ ಪರಿಣಾಮ ಸಾರಿಗೆ ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ. ಇಂದು ಮುಂಜಾನೆ 6-7 ಗಂಟೆಯವರೆಗೆ ಬಸ್ ಸಂಚಾರ ಆರಂಭಗೊಂಡಿತ್ತು. ಆದರೆ ಬಸ್ ಗಳ ಮೇಲೆ ಕಲ್ಲು ತೂರಿದ ಪರಿಣಾಮ ಸಾರಿಗೆ ಬಸ್ ಚಾಲಕರು ಬಸ್ ಗಳನ್ನು ರೋಡಿಗಿಳಿಸಿಲ್ಲ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: