ಕ್ರೀಡೆ

ಆಸಿಸ್‍ನಲ್ಲಿ ಇತಿಹಾಸ ಬರೆದ ಭಾರತ ತಂಡಕ್ಕೆ ಬಿಸಿಸಿಐನಿಂದ ಭಾರೀ ಬಹುಮಾನ!

ನವದೆಹಲಿ (ಜ.9): ಆಸ್ಪ್ರೇಲಿಯಾ ನೆಲದಲ್ಲಿ 2-1ರ ಅಂತರದಲ್ಲಿ ಟೆಸ್ಟ್‌ ಸರಣಿ ಗೆದ್ದು ಇತಿಹಾಸ ಬರೆದ ಭಾರತ ತಂಡಕ್ಕೆ ಬಿಸಿಸಿಐ ನಗದು ಬಹುಮಾನ ಘೋಷಿಸಿದೆ.

ಪಂದ್ಯದ ಆಡುವ ಹನ್ನೊಂದರಲ್ಲಿ ಇದ್ದ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 15 ಲಕ್ಷ ರೂಪಾಯಿ, ಮೀಸಲು ಆಟಗಾರರಿಗೆ ಪ್ರತಿ ಪಂದ್ಯಕ್ಕೆ 7.5 ಲಕ್ಷ ರುಪಾಯಿ ಬಹುಮಾನ ಘೋಷಿಸಲಾಗಿದೆ. ಅಂದರೆ ಸರಣಿಯಲ್ಲಿ ಎಲ್ಲ 4 ಪಂದ್ಯಗಳನ್ನಾಡಿದ ವಿರಾಟ್‌ ಕೊಹ್ಲಿ, ಚೇತೇಶ್ವರ್‌ ಪೂಜಾರ, ರಿಷಭ್‌ ಪಂತ್‌, ಜಸ್‌ಪ್ರೀತ್‌ ಬುಮ್ರಾ, ಅಜಿಂಕ್ಯ ರಹಾನೆಗೆ ತಲಾ 60 ಲಕ್ಷ ರುಪಾಯಿ ಸಿಗಲಿದೆ.

ಪ್ರಧಾನ ಕೋಚ್‌ ರವಿಶಾಸ್ತ್ರಿ, ಬೌಲಿಂಗ್‌ ಕೋಚ್‌ ಭರತ್‌ ಅರುಣ್‌, ಸಹಾಯಕ ಕೋಚ್‌ ಸಂಜಯ್‌ ಬಾಂಗರ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಆರ್‌.ಶ್ರೀಧರ್‌ಗೆ ತಲಾ 25 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕೋಚ್‌ಗಳಲ್ಲದ ಸಹಾಯಕ ಸಿಬ್ಬಂದಿಗೂ ನಗದು ಬಹುಮಾನ ವಿತರಿಸುವುದಾಗಿ ಬಿಸಿಸಿಐ ಹೇಳಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಮೊದಲ ಹಾಗೂ ಮೂರನೇ ಟೆಸ್ಟ್ ಕ್ರಮವಾಗಿ ಅಡಿಲೇಡ್ ಹಾಗೂ ಮೆಲ್ಬರ್ನ್’ನಲ್ಲಿ ನಡೆದ ಪಂದ್ಯವನ್ನು ಜಯಿಸಿತ್ತು. ಆತಿಥೇಯ ತಂಡವು ಪರ್ತ್’ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತ್ತು. ಸಿಡ್ನಿಯಲ್ಲಿ ನಡೆದ ಅಂತಿಮ ಟೆಸ್ಟ್ ಮಳೆಯಿಂದಾಗಿ ಡ್ರಾನಲ್ಲಿ ಅಂತ್ಯವಾಗಿತ್ತು. (ಎನ್.ಬಿ)

Leave a Reply

comments

Related Articles

error: