ಮೈಸೂರು

ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣು

ಯುವಕನೋರ್ವ ಮನೆಯಲ್ಲಿದ್ದ ಗನ್’ನಿಂದ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ಬೆಳಗಿನ ಜಾವ ಮೈಸೂರಿನಲ್ಲಿ ನಡೆದಿದೆ.

ರಾಘವೇಂದ್ರ ನಿವಾಸಿ ಭುವನ್ (19) ಗುಂಡು ಹಾರಿಸಿಕೊಂಡು ಮೃತಪಟ್ಟ ವ್ಯಕ್ತಿ. ಈತ ಮೈಸೂರಿನ ಎನ್.ಐ.ಇ ಕಾಲೇಜಿನಲ್ಲಿ ಐ.ಟಿ.ಐ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಈತನ ತಂದೆ ರಾಮಣ್ಣ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ವೃತ್ತಿಯಿಂದ ನಿವೃತ್ತರಾಗಿದ್ದರು. ಅವರಿಗೆ ನೀಡಲಾಗಿದ್ದ ಸರ್ವೀಸ್ ರಿವಾಲ್ವರ್’ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಬುಧವಾರ ರಾತ್ರಿ 11 ಗಂಟೆಗೆ ಊಟ ಮುಗಿಸಿ ತನ್ನ ರೂಮ್’ಗೆ ತೆರಳಿದ ಭುವನ್, ಪೋನ್’ನಲ್ಲಿ ಬಹಳ ಹೊತ್ತು ಮಾತನಾಡಿದ್ದು, ಮನೆಯವರು ಯಾರೆಂದು ವಿಚಾರಿಸಲಾಗಿ ತನ್ನ ಸ್ನೇಹಿತ ಎಂಬ ಉತ್ತರ ನೀಡಿದ್ದಾನೆ ಎಂದು ತಿಳಿದು ಬಂದಿದೆ.

ಆದರೆ ಗುರುವಾರ ಬೆಳಗಿನ ಜಾವ 5.30 ರ ಸುಮಾರಿಗೆ ರಿವಾಲ್ವರ್’ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಸ್ಥಳಕ್ಕೆ ನಜರ್’ಬಾದ್ ಠಾಣೆಯ ಇನ್ಸ್’ಪೆಕ್ಟರ್ ಶೇಖರ್ ಅವರು ಸಿಬ್ಬಂದಿ ಪ್ರಕಾಶ್, ಮಹೇಶ್ ಜೊತೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಸಹಜ ಸಾವು ಎಂದು ದಾಖಲಿಸಿಕೊಳ್ಳಲಾಗಿದ್ದು, ಶವವನ್ನು ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ದೂರವಾಣಿಯ ಸಂಪೂರ್ಣ ಮಾಹಿತಿಯ ಬಳಿಕವಷ್ಟೇ ಆತ್ಮಹತ್ಯೆಗೆ ಕಾರಣ ಕುರಿತಾದ ಹೆಚ್ಚಿನ ವಿವರಗಳು ತಿಳಿದು ಬರಬೇಕಿದೆ.

ನಜರ್’ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: