ಕರ್ನಾಟಕಪ್ರಮುಖ ಸುದ್ದಿ

ಯಾದಗಿರಿಯಲ್ಲಿ ಕುಡಿಯುವ ನೀರಿಗೆ ವಿಷ! ಮಹಿಳೆ ಸಾವು, ಹಲವರು ಅಸ್ವಸ್ಥ

ಯಾದಗಿರಿ (ಜ.10): ಇತ್ತಿಚೆಗೆ ಚಾಮರಾಜನಗರ ಜಿಲ್ಲೆ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷಪ್ರಾಶನ ಪ್ರಕರಣದಲ್ಲಿ 17 ಮಂದಿ ಮೃತಪಟ್ಟ ದಾರುಣ ಪ್ರಕರಣ ಮಾಸುವ ಮುನ್ನವೇ ಯಾದಗಿರಿಯಲ್ಲಿ ಕುಡಿಯುವ ನೀರಿಗೆ ದುಷ್ಕರ್ಮಿಗಳು ವಿಷ ಬೆರೆಸಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿ ಹಲವರು ಅಸ್ವಸ್ಥರಾಗಿರುವ ಘಟನೆ ತಡರಾತ್ರಿ ನಡೆದಿದೆ.

ವಿಷ ಮಿಶ್ರಿತ ನೀರು ಕುಡಿದು ಅಸ್ವಸ್ಥಗೊಂಡಿದ್ದ ಹೊನ್ನಮ್ಮ (65) ಸಾವನ್ನಪ್ಪಿದ್ದಾರೆ. ಯಾದಗಿರಿ ಜಿಲ್ಲೆ, ಸುರಪುರ ತಾಲೂಕಿನ ತೆಗ್ಗಳ್ಳಿ ಗ್ರಾಮದ ನಿವಾಸಿಯಾದ ಇವರನ್ನು ಕೆಂಬಾವಿ ಆಸ್ಪತ್ರೆಯಿಂದ ಕಲಬುರಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಗ್ರಾಮದ ನಾಲ್ವರು ಅಸ್ವಸ್ಥರಾಗಿದ್ದು, ಅವರನ್ನೂ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯಾದಗಿರಿಯ ಸುರಪುರ, ತೆಗ್ಗಳ್ಳಿ ಗ್ರಾಮಗಳಿಗೆ ಸರಬರಾಜಾಗುವ ಕುಡಿಯುವ ನೀರಿನ ಟ್ಯಾಂಕ್‍ಗೆ ಅರ್ಧ ಲೀಟರ್‍ನಷ್ಟು ಎಂಡೋಸಲ್ಫಾನ್ ಕ್ರಿಮಿನಾಶಕ ಬೆರೆಸಲಾಗಿದೆ ಎಂದು ತಿಳಿದುಬಂದಿದೆ. ಈ ಟ್ಯಾಂಕ್‍ನಿಂದ ತಾಲೂಕಿನ ತೆಗ್ಗಳ್ಳಿ ಗ್ರಾಮಕ್ಕೆ ನೀರು ಪೂರೈಕೆಯಾಗಿದೆ. ಬೆಳಗ್ಗೆ ನೀರು ಹಿಡಿಯಲು ಬಂದ ಗ್ರಾಮಸ್ಥರು ನೀರಿನಲ್ಲಿ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ ಕೂಡಲೇ ಪಂಪ್ ಆಪರೇಟರ್ ಮೌನೇಶ್ ಗಮನಕ್ಕೆ ತಂದಿದ್ದಾರೆ. ತಕ್ಷಣ ಶಖಪುರ, ಮುದನೂರು, ತೆಗ್ಗಳ್ಳಿ ಗ್ರಾಮಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.

ಗ್ರಾಮಸ್ಥರೆಲ್ಲ ಜಾಗೃತಗೊಂಡು ಯಾರೂ ನೀರು ಸೇವಿಸದಂತೆ ಡಂಗೂರ ಸಾರಿದ್ದಾರೆ. ಸುದ್ದಿ ತಿಳಿದ ಕೂಡಲೇ ಮುದನೂರು ಗ್ರಾಮಕ್ಕೆ ಜಿಪಂ ಸಿಇಒ ಕವಿತಾ ಮನ್ನಿಕೆರೆ, ಸುರಪುರ ತಹಸೀಲ್ದಾರ್ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಂಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾಧಿಕಾರಿ ಕೂರ್ಮರಾವ್ ಅವರು ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಅನಾಹುತಗಳು ನಡೆಯದಂತೆ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನೀರಿಗೆ ಕ್ರಿಮಿನಾಶಕ ಬೆರೆಸಿರುವ ಸುದ್ದಿ ಈ ಭಾಗದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಸುತ್ತಮುತ್ತಲ ಗ್ರಾಮಸ್ಥರು ನಲ್ಲಿಗಳಲ್ಲಿ ಬರುತ್ತಿರುವ ನೀರು ಕುಡಿಯಲು ಅನುಮಾನ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. (ಎನ್.ಬಿ)

Leave a Reply

comments

Related Articles

error: