ದೇಶಪ್ರಮುಖ ಸುದ್ದಿ

ಅರೆಸೇನಾ ಪಡೆಗೆ ಮಲತಾಯಿ ಧೋರಣೆ ಆರೋಪ : ಸಿ.ಆರ್.ಪಿ.ಎಫ್ ಯೋಧನಿಂದ ವಿಡಿಯೋ ರಿಲೀಸ್

ನವದೆಹಲಿ: ದೇಶ ಕಾಯುವ ನಮಗೆ ಕಳಪೆ ಆಹಾರವನ್ನು ನೀಡಲಾಗುತ್ತದೆ ಎಂದು ಆರೋಪಿಸಿ ಕಳೆದ ಭಾನುವಾರ ಬಿ.ಎಸ್.ಎಫ್ ಯೋಧ ಯಾದವ್ ಅವರು ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ ಗುರುವಾರ ಮೌಂಟ್ ಅಬುನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿ.ಆರ್.ಪಿ.ಎಫ್ ಪೇದೆಯೊಬ್ಬರು ಕೂಡ ತಮಗೆ ನೀಡುವ ಸೌಲಭ್ಯಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ವಿಡಿಯೋ ಮೂಲಕ ದೂರಿದ್ದಾರೆ.

ಸಿ.ಆರ್.ಪಿ.ಎಫ್ ಪೇದೆಗಳು ದೇಶದಲ್ಲಿ ಯಾವ ಕೆಲಸ ನೀಡಿದರೂ ಮಾಡಲು ಸಿದ್ಧರಾಗಿರುತ್ತಾರೆ. ಲೋಕಸಭಾ, ರಾಜ್ಯಸಭಾ, ಪಂಚಾಯಿತಿ ಚುನಾವಣೆ, ಸಂಸತ್ ಭವನ, ದೇವಾಲಯ, ಮಸೀದಿ ಎಲ್ಲ ಕಡೆ ನಾವು ಕೆಲಸ ಮಾಡುತ್ತೇವೆ. ಇಷ್ಟಿದ್ದರೂ ಸೇನೆ ಮತ್ತು ಅರೆ ಸೇನಾಪಡೆಗೆ ನೀಡುವ ಸೌಲಭ್ಯಗಳಲ್ಲಿ ಮಾತ್ರ ತಾರತಮ್ಯವೇಕಿದೆ? ಸೇನೆಗೆ ಪಿಂಚಣಿ ನೀಡಲಾಗುತ್ತದೆ. ನಮಗೆ ನೀಡಲಾಗುತ್ತಿದ್ದ ಪಿಂಚಣಿಯನ್ನೂ ನಿಲ್ಲಿಸಲಾಗಿದೆ. 20 ವರ್ಷಗಳ ನಂತರ ಕೆಲಸ ಬಿಟ್ಟು ಹೋಗುತ್ತೇವೆ. ಮಾಜಿ ಸೈನಿಕರ ಕೋಟಾವೂ ನಮಗೆ ನೀಡಲ್ಲ.

ನಮಗೆ ಎಲ್ಲರಿಗಿಂತ ಕೆಲಸ ಹೆಚ್ಚು. ಆದರೆ, ಕ್ಯಾಂಟೀನ್ ಸೌಲಭ್ಯವಿಲ್ಲ, ಯಾವುದೇ ವೈದ್ಯಕೀಯ ಸೌಲಭ್ಯವಿಲ್ಲ. ಸೇನೆಗೆ ನೀಡಲಾಗುತ್ತಿರುವ ಸೌಲಭ್ಯಗಳ ಬಗ್ಗೆ ತಕರಾರಿಲ್ಲ. ಆದರೆ, ನಮಗೆ ಯಾವುದೇ ಸೌಲಭ್ಯಗಳಿಲ್ಲ. ಈ ರೀತಿಯ ಬೇಧಭಾವ ಯಾಕೆ? ಶಾಲಾ-ಕಾಲೇಜುಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೂ ಕೈತುಂಬಾ ವೇತನ, ಬೇಕಾದಷ್ಟು ರಜೆ ನೀಡಲಾಗುತ್ತದೆ. ಆದರೆ, ಎಲ್ಲೆಡೆ ಕೆಲಸ ನಿರ್ವಹಿಸಲು ಸಿದ್ಧರಿರುವ ನಮ್ಮ ಬಗ್ಗೆ ನಿರ್ಲಕ್ಷ್ಯವೇಕೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಅಧಿಕಾರಿಗಳು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಬಿ.ಎಸ್.ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ವಿಡಿಯೋ ಬಿಡುಗಡೆ ಮಾಡಿದ್ದಕ್ಕೆ ಅವರ ರೆಕಾರ್ಡ್ ಸರಿಯಿಲ್ಲ. ಅವರ ಮಾನಸಿಕ ಸ್ಥಿತಿ ಉತ್ತಮವಾಗಿಲ್ಲ ಎಂದು ಆರೋಪಿಸಿ ಅವರನ್ನು ಬೇರೆಡೆ ಎತ್ತಂಗಡಿ ಮಾಡಲಾಗಿತ್ತು.

Leave a Reply

comments

Related Articles

error: