ಮೈಸೂರು

ಜಿ.ಎಸ್.ಟಿ ಅಡಿಯಲ್ಲಿ ಜನವರಿ 15 ರೊಳಗೆ ನೋಂದಣಿ ಮಾಡಿಸಿಕೊಳ್ಳಿ : ಕೆ.ನಾಗೇಶ್ ರಾವ್

ದೇಶಾದ್ಯಂತ ಏಕರೂಪ ತೆರಿಗೆ ಪದ್ಧತಿಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಜಾರಿಯಾಗುತ್ತಿರುವುದರಿಂದ ಎಲ್ಲ ನೋಂದಾಯಿತ ವರ್ತಕರು ಹಾಗೂ ವ್ಯಾಪಾರಸ್ಥರು ಜಿಎಸ್‍ಟಿ ಅಡಿಯಲ್ಲಿ ಜ.15ರೊಳಗೆ ದಾಖಲಾತಿ ಹಾಗೂ ನೋಂದಣಿ ಮಾಡಿಕೊಳ್ಳಿ ಎಂದು ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಕೆ.ನಾಗೇಶ್‍ರಾವ್ ತಿಳಿಸಿದರು.

ಗುರುವಾರ ಮೈಸೂರಿನ ದಿವಾನ್ಸ್ ರಸ್ತೆಯಲ್ಲಿರುವ ಶೇಷಾದ್ರಿ ಹೌಸ್‍ನಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಮಡಿಕೇರಿ ವಿಭಾಗದ ವರ್ತಕರು ಹಾಗೂ ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟನ್ನು ಸುಗಮವಾಗಿ ನಡೆಸಲು ಜಿಎಸ್‍ಟಿ ಅಡಿಯಲ್ಲಿ ವ್ಯಾಟ್ ತೆರಿಗೆ ಪದ್ಧತಿಯಿಂದ ಜಿಎಸ್‍ಟಿ ತೆರಿಗೆ ಪದ್ಧತಿಗೆ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕಿದ್ದು, ಅದಕ್ಕಾಗಿ ಜ.1ರಿಂದ 15ರ ವರೆಗೆ ಕಾಲಾವಕಾಶ ನೀಡಿಲಾಗಿದೆ. ಈ ಅವಧಿಯಲ್ಲಿ ಕೇವಲ ರಾಜ್ಯದಲ್ಲಿ ನೋಂದಣಿ ಪ್ರಕ್ರಿಯೆ ನಡೆಯುವುದರಿಂದ ಸುಗಮವಾಗಿ ನೋಂದಣಿ ಮಾಡಬಹುದು. ಬಳಿಕ ದೇಶಾದ್ಯಂತ ನೋಂದಣಿ ಪ್ರಕ್ರಿಯೆ ಆರಂಭವಾಗಿ ಸರ್ವರ್ ಬ್ಯುಸಿಯಾಗುವುದರಿಂದ ತಡಮಾಡದೆ ನಿಗದಿತ ದಿನಾಂಕದೊಳಗೆ ನೋಂದಣಿ ಪ್ರಕ್ರಿಯೆ ಮಾಡಿ. ಇದಕ್ಕಾಗಿ ಸಹಾಯವಾಣಿ ತೆರದಿದ್ದು ಸಂಕ್ರಾಂತಿ ಹಬ್ಬ ಹಾಗೂ ಭಾನುವಾರದಂದು ಕೂಡ ಕಚೇರಿ ತೆರೆದಿರುತ್ತದೆ ಎಂದು ಹೇಳಿದರು.

ಮೈಸೂರು ವಿಭಾಗದಲ್ಲಿ ಮೌಲ್ಯವರ್ಧಿತ ತೆರಿಗೆ ಅಡಿಯಲ್ಲಿ ಸುಮಾರು 52389 ತೆರಿಗೆದಾರರಿದ್ದು 49758 ಮಂದಿ ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಅದರಲ್ಲಿ 7572 ಮಂದಿ ನೋಂದಣಿ ಹಾಗೂ ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು ಶೇ.22ರಷ್ಟು ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ನೋಂದಣಿಯಲ್ಲಿ ಬೆಂಗಳೂರು ಮೊದಲನೆ ಸ್ಥಾನದಲ್ಲಿದ್ದು, ಮೈಸೂರು ವಿಭಾಗ 10ನೇ ಸ್ಥಾನದಲ್ಲಿದೆ. 2015-16ರಲ್ಲಿ 71.67 ಕೋಟಿ, 2016-17ರಲ್ಲಿ 95.96 ಕೋಟಿ ತೆರಿಗೆ ಸಂಗ್ರಹಣೆಯಾಗಿದೆ. ವಾರ್ಷಿಕ 1308 ಕೋಟಿ ಸಂಗ್ರಹಣೆ ಗುರಿಯಿದ್ದು 880 ಕೋಟಿ ತೆರಿಗೆ ಸಂಗ್ರಹ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.10ರಷ್ಟು ಬೆಳವಣಿಗೆಯಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ  ಜಾರಿ ವಿಭಾಗದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಬಿ.ಎನ್.ಗಿರಿಯಣ್ಣನವರ್, ಅಧಿಕಾರಿಗಳಾದ ಬಾಣೇಗೌಡ, ದೀಪಾ, ರಾಜೇಂದ್ರಕುಮಾರ್, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: