ಪ್ರಮುಖ ಸುದ್ದಿ

ವರ್ಣರಂಜಿತ ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನದ ಆಕರ್ಷಣೆ : ಸಚಿವ ಸಾ.ರಾ.ಮಹೇಶ್ ರಿಂದ ಚಾಲನೆ

ರಾಜ್ಯ(ಮಡಿಕೇರಿ) ಜ.11 :- ಜಿಲ್ಲಾಡಳಿತ, ಜಿ.ಪಂ, ತೋಟಗಾರಿಕಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಪಶುಪಾಲನೆ ಇಲಾಖೆಯ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯುವ ಕೊಡಗು ಪ್ರವಾಸಿ ಉತ್ಸವದ ಅಂಗವಾಗಿ ಹೆಸರುವಾಸಿ ಪ್ರವಾಸಿತಾಣ ರಾಜಾಸೀಟು ಉದ್ಯಾನವನದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನವನ್ನು ಪ್ರವಾಸೋದ್ಯಮ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಉದ್ಘಾಟಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅತಿವೃಷ್ಟಿ ಹಾನಿಯಿಂದ ಕೊಡಗಿನ ಪ್ರವಾಸೋದ್ಯಮ ಕ್ಷೇತ್ರ ಕೂಡ ಸಂಕಷ್ಟಗಳನ್ನು ಎದುರಿಸಿದೆ. ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಮತ್ತೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಪ್ರವಾಸಿ ಉತ್ಸವವವನ್ನು ಆಯೋಜಿಸಿರುವುದಾಗಿ ತಿಳಿಸಿದರು.

ರಾಜಾಸೀಟು ಉದ್ಯಾನವನಕ್ಕೆ ಕಾಯಕಲ್ಪ ನೀಡಲಾಗುವುದೆಂದು ಸಚಿವರು ಇದೇ ಸಂದರ್ಭ ಭರವಸೆ ನೀಡಿದರು. ಉದ್ಯಾನವನದಲ್ಲಿ 8 ರಿಂದ-10 ಸಾವಿರ ಸಂಖ್ಯೆಯ ವಿವಿಧ ಜಾತಿಯ ಹೂವುಗಳಾದ ಪೇಟೂನಿಯಾ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚಂಡುಹೂ, ಪ್ಲಾಕ್ಸ್, ವಿಂಕಾ ರೋಸಿಯಾ, ಡೇಲಿಯಾ ಇತ್ಯಾದಿಗಳನ್ನು ಪಾತಿಯಲ್ಲಿ ನಾಟಿ ಮಾಡಲಾಗಿದ್ದು, 5000-6000 ಕುಂಡಗಳಲ್ಲಿ ವಿವಿಧ ಜಾತಿಯ ಹೂವುಗಳು ಆಕರ್ಷಿಸುತ್ತಿವೆ.

ಕೊಡಗಿನ ಕುಲದೇವತೆಯಾದ ಕಾವೇರಿ ಮಾತೆಯ ಪುಷ್ಪಾಲಂಕೃತ ಕಲಾಕೃತಿ ಪ್ರಮುಖ ಆಕರ್ಷಣೆಯಾಗಿದೆ. ಮಕ್ಕಳಿಗೆ ಮನರಂಜನೆ ನೀಡುವಂತಹ ಸ್ಪೈಡರ್ ಮ್ಯಾನ್, ಮಿಕ್ಕಿ ಮೌಸ್, ಡೊನಾಲ್ಡ್ ಡಕ್, ಡೋರಮ್ಯಾನ್ ಮಾದರಿಯಲ್ಲಿ ಹೂವು ಮತ್ತು ಎಲೆಗಳಿಂದ ತಯಾರಿಸಲಾಗಿದೆ.

ಮಾವು, ಕಿತ್ತಳೆ, ಅನಾನಾಸ್ ಹಣ್ಣುಗಳು ಹಾಗೂ ದಪ್ಪ ಮೆಣಸಿನ ಕಾಯಿ ತರಕಾರಿಗಳಿಂದ ಆನೆ, ನವಿಲು, ಗಿಟಾರ್, ತಬಲ ಇತ್ಯಾದಿಗಳ ಮಾದರಿಯ ಕಲಾಕೃತಿಗಳನ್ನು ನಿರ್ಮಿಸಲಾಗಿದೆ.

ಜಲಚರ ಮೀನುಗಳಾದ ಸ್ಟಾರ್‍ಫಿಷ್, ಆಕ್ಟೊಪಸ್ ಇತ್ಯಾದಿ ಕಲಾಕೃತಿಗಳನ್ನು ಹೂ/ ಅಲಂಕಾರಿ ಎಲೆಗಳಿಂದ ರಚಿಸಲಾಗಿದೆ. ತರಕಾರಿ/ಹಣ್ಣುಗಳಲ್ಲಿ ವಿವಿಧ ಆಕೃತಿಗಳಲ್ಲಿ ಕೆತ್ತನೆಯ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ವಿವಿಧ ಅಲಂಕಾರಿಕ ಗಿಡಗಳಾದ ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡನೆ ಹಾಗೂ ಕಾಕ್‍ಟಸ್‍ಗಳ ಜೋಡಣೆ ಆಕರ್ಷಿಸುತ್ತಿದೆ.

ರಾಜಾಸೀಟು ಮಂಟಪವನ್ನು ಹಾಗೂ ಮುಂಭಾಗದ ಮುಖ್ಯದ್ವಾರವನ್ನು ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಗಾಂಧಿ ಮೈದಾನದಲ್ಲಿ ತೋಟಗಾರಿಕೆ ಇಲಾಖೆಯ ವಸ್ತು ಪ್ರದರ್ಶನದ ಮಳಿಗೆಯನ್ನು ಆಯೋಜಿಸಲಾಗಿದೆ. ರೈತರು ಬೆಳೆದಿರುವಂತಹ ವಿಶಿಷ್ಟವಾದ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಾಂಬಾರು ಬೆಳೆಗಳ ಪ್ರದರ್ಶನ ನಡೆಯುತ್ತಿದೆ.ಇದರೊಂದಿಗೆ ಸಂಗೀತ ಕಾರಂಜಿ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ವಿಧಾನ ಪರಿಷತ್ ಸದಸ್ಯೆ ವೀಣಾಅಚ್ಚಯ್ಯ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯ, ನಗರಸಭಾ ಸದಸ್ಯರುಗಳು, ತೋಟಗಾರಿಕಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಪಶುಪಾಲನೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು.

ಮೂರು ದಿನಗಳ ಕಾಲ ರಾಜಾಸೀಟ್ ಉದ್ಯಾನವನದಲ್ಲಿ ವೈವಿಧ್ಯಮಯ ಪುಷ್ಪರಾಶಿಗಳು ಪ್ರಕೃತಿ ಮತ್ತು ಪುಷ್ಪ ಪ್ರಿಯರನ್ನು ಆಕರ್ಷಿಸಲಿವೆ. ವಾರಾಂತ್ಯದ ರಜೆಗಳಿರುವುದರಿಂದ ಸಾವಿರಾರು ಪ್ರವಾಸಿಗರ ನಿರೀಕ್ಷೆಯಲ್ಲಿ ಪ್ರವಾಸಿ ಉತ್ಸವ ನಡೆಯುತ್ತಿದ್ದು, ವರ್ಣರಂಜಿತ ರಾಜಾಸೀಟು ಉದ್ಯಾನವನ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: