ಮೈಸೂರು

ಮಹಿಳೆಯ ಗಮನ ಬೇರೆಡೆಗೆ ಸೆಳೆದು ಚಿನ್ನಾಭರಣ ಅಪಹರಣ

ಮೈಸೂರು,ಜ.12:- ಮಹಿಳೆಯ ಗಮನ ಬೇರೆಡೆಗೆ ಸೆಳೆದು ಚಿನ್ನದ ಸರ, ಉಂಗುರವನ್ನು ಓರ್ವ ಮಹಿಳೆ ಮತ್ತು ಪುರುಷ ಸೇರಿ ಲಪಟಾಯಿಸಿದ ಘಟನೆ ನಂಜುಮಳಿಗೆ ಬಳಿ ನಡೆದಿದೆ.

ರತ್ನಾಬಾಯಿ ಎಂಬವರು ಗುರುವಾರ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ನಾರಾಯಣ ಶಾಸ್ತ್ರಿ ರಸ್ತೆ ಕಡೆಯಿಂದ ನಂಜುಮಳಿಗೆ ಕಡೆ ನಡೆದು ಬರುತ್ತಿದ್ದಾಗ ಮಹಿಳೆಯೋರ್ವಳು ಎದುರಾಗಿ ಹಣ ತುಂಬಿದ ಪರ್ಸ್ ಸಿಕ್ಕಿದೆ ಎಂದು ತೋರಿಸಿದ್ದು, ಪರ್ಸ್ ನಲ್ಲಿರುವ ಹಣವನ್ನು ಇಬ್ಬರೂ ಹಂಚಿಕೊಳ್ಳೋಣ ಎಂದು ರಸ್ತೆ ಬದಿಗೆ ಕರೆದೊಯ್ದಿದ್ದಳು. ಅಷ್ಟರಲ್ಲೇ ಅಲ್ಲಿಗೆ ಪುರುಷನೋರ್ವ ಬಂದು ಪರ್ಸ್ ಸಿಕ್ಕಿದೆಯೇ ಎಂದು ಕೇಳಿದ್ದಾನೆ. ಇವರಿಬ್ಬರೂ ಇಲ್ಲವೆಂದು ಹೇಳಿದ್ದಾರೆ. ತಮ್ಮ ಮಾಂಗಲ್ಯದ ಸರ ಮತ್ತು ಇತರ ಆಭರಣಗಳ ಮೇಲೆ ಆಣೆ ಮಾಡುವಂತೆ ಆತ ಹೇಳಿದ್ದು ಇಬ್ಬರೂ ಸರ, ಉಂಗುರಗಳನ್ನು ಬಿಚ್ಚಿ ಕಾಗದದಲ್ಲಿ ಮಡಚಿ ತಲೆಯ ಮೇಲೆ ಇಟ್ಟುಕೊಂಡು ಪ್ರಮಾಣ ಮಾಡಿದ್ದಾರೆ. ಬಳಿಕ ಪೊಟ್ಟಣವನ್ನು ಇಲ್ಲಿ ತೆರೆಯಬೇಡಿ ಎಂದು ಹೇಳಿದ ಮಹಿಳೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಕೊಂಚ ದೂರು ಹೋಗಿ ರತ್ನಾಬಾಯಿ ಪೊಟ್ಟಣ ಬಿಚ್ಚಿ ನೋಡಿದಾಗ 40ಗ್ರಾಂ ತೂಕದ ಚಿನ್ನದ ಸರ ಹಾಗೂ 5ಗ್ರಾಂ ತೂಕದ ಚಿನ್ನದ ಉಂಗುರದ ಬದಲು ಮರಳು ಇರುವುದು ಕಂಡು ಬಂದಿದೆ. ಚಿನ್ನದ ಸರ ಇರುವ ಪೊಟ್ಟಣವನ್ನು ಮರಳು ತುಂಬಿರುವ ಪೊಟ್ಟಣಕ್ಕೆ ಬದಲಿಸಿ ಪುರುಷ ಹಾಗೂ ಮಹಿಳೆ ವಂಚಿಸಿದ್ದಾರೆಂದು ರತ್ನಾಬಾಯಿ ಕೆ.ಆರ್.ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: