ಕರ್ನಾಟಕಪ್ರಮುಖ ಸುದ್ದಿ

ಎಚ್‍ಡಿಕೆ ಸರ್ಕಾರ ಉಳಿಸಲು ಮೊರೆ: ಅಶ್ವತ್ಥ್ ನಾರಾಯಣಗೆ ಸ್ವಾಮೀಜಿ ಕ್ಲಾಸ್?

ಬೆಂಗಳೂರು (ಜ.16): ರಾಜ್ಯದಲ್ಲಿರುವ ಎಚ್‍ಡಿಕೆ ನೇತೃತ್ವದ ಸರಕಾರ ಬೀಳಿಸಲು ಬಿಜೆಪಿ ಸರ್ಕಸ್ ನಡೆಸುತ್ತಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಲ್ಲಿ ಕೂರಿಸುವುದಕ್ಕೆ ಬಿಜೆಪಿಯ ಬಹುತೇಕ ನಾಯಕರುಗಳು ಸಿದ್ಧರಾಗಿದ್ದಾರೆ ಎನ್ನುವ ಮಾಹಿತಿಯಿದ್ದು, ಇದಕ್ಕಾಗಿ ಹರಿಯಾಣದ ರೆಸಾರ್ಟ್‍ನಲ್ಲಿ ಕುಳಿತುಕೊಂಡು ಮಾಜಿ ಸಿಎಂ ಯಡಿಯೂರಪ್ಪನವರು ತಂತ್ರ ಹೆಣೆಯುತ್ತಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದೊಡನೆ ಇತ್ತ ದೋಸ್ತಿ ಪಕ್ಷಗಳು ರಾಜ್ಯ ಸರ್ಕಾರ ಉಳಿಸಿಕೊಳ್ಳಲು ಅಖಾಡಕ್ಕಿಳಿದಿವೆ. ಕಾಂಗ್ರೆಸ್ ಪಕ್ಷ ತನ್ನ ಶಾಸಕರನ್ನು ವಾಪಸ್ ಕರೆಸಲು ಇನ್ನಿಲ್ಲದ ಹರಸಾಹ ಮಾಡುತ್ತಿದ್ದರೆ ಜೆಡಿಎಸ್ ಪಕ್ಷವೂ ನೇರವಾಗಿಯಲ್ಲದಿದ್ದರೂ ಪರೋಕ್ಷವಾಗಿ ಫೀಲ್ಡಿಗಿಳಿದಿದೆ ಎನ್ನಲಾಗಿದೆ.

ಬಹು ಮುಖ್ಯವಾಗಿ, ಆಪರೇಷನ್ ಕಮಲಕ್ಕೆ ಕೈ ಹಾಕಿರುವ ಶಾಸಕ ವಿಧಾನಪರಿಷತ್ ಸದಸ್ಯ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ಅವರನ್ನು ಕಟ್ಟಿ ಹಾಕುವುದಕ್ಕೆ ಜೆಡಿಎಸ್ ನಾಯಕರುಗಳು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ನಿರ್ಮಲಾನಂದಾ ಸ್ವಾಮೀಜಿಗಳಿಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಶಾಸಕ ಡಾ. ಸಿ.ಎನ್‌.ಅಶ್ವತ್ಥನಾರಾಯಣ್‌ ಅವರು ಆಪರೇಷನ್ ಕಮಲದ ಕಾರ‍್ಯಚರಣೆಯಲ್ಲಿ ಪ್ರಮುಖ ಹೆಸರು ಕೇಳಿಬರುತ್ತಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಾ‌.ಅಶ್ವತ್ಥನಾರಾಯಣ್ ಅವರೇ ನಮ್ಮ ಸರ್ಕಾರವನ್ನು ಪತನಗೊಳಿಸಲು ಮುಂದಾದರೆ ಹೇಗೆ? ನೀವು ಮಠಾಧೀಶರು, ಶಾಸಕರಿಗೆ ಸ್ವಲ್ಪ ಕಿವಿಮಾತು ಹೇಳಿ ಅಂತ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಹೆಚ್.ಡಿ.ಕುಮಾರಸ್ವಾಮಿ ಶ್ರೀಗಳ ಜೊತೆ ತಮ್ಮ ಅಸಮಾಧಾವನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಜೆಡಿಎಸ್ ಸರಕಾರವನ್ನು ಈ ಹಿಂದೆ ಇಕ್ಕಟ್ಟಿಗೆ ಸಿಲುಕಿಸಿದ ವೇಳೆಯಲ್ಲೂ ಕೂಡ ಶ್ರೀಗಳು ಪರೋಕ್ಷವಾಗಿ ಸರಕಾರದ ವಿರುದ್ಧ ಮಾತನಾಡುವವರಿಗೆ ಎಚ್ಚರಿಕೆ ನೀಡಿದ್ದರು. ಈಗ ಮತ್ತೆ ಸರಕಾರ ಆಪತ್ತಿಗೆ ಸಿಲುಕಿರುವುದರಿಂದ ದೋಸ್ತಿ ಪಕ್ಷಗಳಿಗೆ ಶ್ರೀಗಳು ನೆರವಾಗುತ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಾಗಿದೆ. (ಎನ್.ಬಿ)

Leave a Reply

comments

Related Articles

error: