ದೇಶವಿದೇಶ

ಬ್ರೆಕ್ಸಿಟ್ ಒಪ್ಪಂದ ತಿರಸ್ಕರಿಸಿದ ಬ್ರಿಟನ್ ಪಾರ್ಲಿಮೆಂಟ್!

ಲಂಡನ್ (ಜ.16): ಬ್ರಿಟನ್ ಪ್ರಧಾನಿ ಥೆರೇಸಾ ಮೇ ಹಾಗೂ ಯೂರೋಪಿಯನ್ ಒಕ್ಕೂಟದ ನಡುವೆ ಆದ ಒಪ್ಪಂದವನ್ನು ಬ್ರಿಟನ್ ಪಾರ್ಲಿಮೆಂಟ್ 432-202 ಮತಗಳಿಂದ ತಿರಸ್ಕರಿಸಿದೆ. ಯೂರೋಪಿಯನ್ ಒಕ್ಕೂಟದಿಂದ ಹೊರಬರಲು ನಿಗದಿಪಡಿಸಿದ ಗಡುವಿಗೆ 79 ದಿನಗಳು ಬಾಕಿ ಇರುವ ವೇಳೆ ಬ್ರಿಟನ್ ಸಂಸದರು, ಈ ಒಪ್ಪಂದವನ್ನು ತಿರಸ್ಕರಿಸಿದ್ದಾರೆ.

ಬ್ರೆಕ್ಸಿಟ್ ದೃಷ್ಟಿಕೋನವನ್ನು ಜನತೆಗೆ ಮನವರಿಕೆ ಮಾಡಲು ಎರಡೂವರೆ ವರ್ಷಗಳಿಂದ ಪ್ರಯತ್ನಿಸುತ್ತಿರುವ ಮೇ ಪ್ರಯತ್ನಕ್ಕೆ ಈ ಬೆಳವಣಿಗೆ ತೀವ್ರ ಹಿನ್ನಡೆ ತಂದಿದೆ ಹಾಗೂ ಪ್ರಧಾನಿಗೆ ಅವಮಾನಕರ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಮಾರ್ಚ್ 29 ರಂದು ಬ್ರಿಟನ್, ಯೂರೋಪಿಯನ್ ಒಕ್ಕೂಟದಿಂದ ಹೊರಬರುತ್ತದೆಯೇ ಎಂಬ ಬಗ್ಗೆ ಗಂಭೀರ ಸಂದೇಹಗಳನ್ನು ಹುಟ್ಟುಹಾಕಿದೆ.

ಹೌಸ್ ಆಫ್ ಕಾಮನ್ಸ್‌ನಲ್ಲಿ ಅವರದ್ದೇ ಪಕ್ಷದ ಮುಖಂಡರು ಕೂಡಾ ಪ್ರಧಾನಿ ಪರವಾಗಿ ನಿಲ್ಲದ ಕಾರಣ ಥೆರೇಸಾ ಮೇ ಬಹುತೇಕ ಒಬ್ಬಂಟಿಯಾದರು. 1886ರಲ್ಲಿ ಅಂದಿನ ಪ್ರಧಾನಿ ವಿಲಿಯಂ ಗ್ಲಾಡ್‌ಸ್ಟನ್ ಅವರ ಐರಿಷ್ ಹೋಂರೂಲ್ ನಿರ್ಧಾರಕ್ಕೆ ಆದ ಸೋಲಿಗೆ, ಬ್ರೆಕ್ಸಿಟ್ ಸೋಲನ್ನು ಇತಿಹಾಸಗಾರರು ಹೋಲಿಸಿದ್ದಾರೆ. 1886ರ ಸೋಲು, ಲಿಬರಲ್ ಪಕ್ಷದ ವಿಭಜನೆಗೆ ಕಾರಣವಾಗಿತ್ತು.

ನಿರ್ಣಯಕ್ಕೆ ಸೋಲಾದ ಬೆನ್ನಲ್ಲೇ ವಿರೋಧ ಪಕ್ಷವಾದ ಲೇಬರ್ ಪಾರ್ಟಿ ಮುಖಂಡ ಜೆರೆಮಿ ಕೊರ್ಬಿಯಾನ್, ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಇದು ಬುಧವಾರ ಚರ್ಚೆಗೆ ಬರಲಿದ್ದು, ಬಳಿಕ ಮತಕ್ಕೆ ಹಾಕಲಾಗುತ್ತದೆ. ಹೀಗಾಗಿ ತೆರೆಸಾ ಮೇ ಬ್ರಿಟನ್ ಪ್ರಧಾನಿ ಹುದ್ದೆಯನ್ನು ಉಳಿಸಿಕೊಳ್ಳುವರೇ ಎಂಬುದು ಸದ್ಯದ ಪ್ರಶ್ನೆಯಾಗಿದೆ. (ಎನ್.ಬಿ)

Leave a Reply

comments

Related Articles

error: