ಮೈಸೂರು

ಭಾಷೆ ಮತ್ತು ಸಾಹಿತ್ಯ ಇಂದು ಆತಂಕದ ಹಂತದಲ್ಲಿದೆ : ಪ್ರೊ.ತಳವಾರ್ ಕಳವಳ

ಮೈಸೂರು,ಜ.16:- ಭಾಷೆ ಮತ್ತು ಸಾಹಿತ್ಯ ಇಂದು ಆತಂಕದ ಹಂತದಲ್ಲಿದೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ತಳವಾರ್ ತಿಳಿಸಿದರು.

ಅವರಿಂದು ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ನಡೆದ  ಒಂದು ದಿನದ ರಾಜ್ಯ ಮಟ್ಟದ ಸಾಹಿತ್ಯ ಕಮ್ಮಟ’ ‘ಸಾಹಿತ್ಯಾಧ್ಯಯನದ ಹೊಸ ಸಾಧ್ಯತೆಗಳು’ ಉದ್ಘಾಟಿಸಿ ಮಾತನಾಡಿದರು. ಎಷ್ಟು ವೇಗವಾಗಿ ಕಾಲ ಬದಲಾವಣೆಯಾಗುತ್ತಿದೆ ಎಂದರೆ ನೂರು ವರ್ಷ ತುಂಬಾ ದೀರ್ಘವಾದದ್ದಾಯಿತು, 20ವರ್ಷಕ್ಕೆ ಗಮನಾರ್ಹ ಬದಲಾವಣೆಯಾಗಲಿದೆ. ವಿಜ್ಞಾನ, ತಂತ್ರಜ್ಞಾನ, ರಾಜಕೀಯ ವಿದ್ಯಾಮಾನವಿರಲಿ ವೇಗವಾಗಿ ಬದಲಾವಣೆಯಾಗುತ್ತದೆ. ಸಾಹಿತ್ಯ ಯಾವ ಸ್ವರೂಪದಲ್ಲಿದೆ ಎಂಬುದನ್ನು ಗಂಭೀರವಾಗಿ ಆಲೋಚಿಸಬೇಕಿದೆ. ಹೊಸ ಸಾದ್ಯತೆಯನ್ನು ಹುಡುಕುವ ಸಂದರ್ಭದಲ್ಲಿ ಚರಿತ್ರೆಯನ್ನು ಸಿಂಹಾವಲೋಕನ ಮಾಡಿಕೊಳ್ಳಬೇಕಿದೆ. ಕನ್ನಡ ಸಂಕಷ್ಟದಲ್ಲಿದ್ದ ಕಾಲದಲ್ಲಿ ಬಿ.ಎಂಶ್ರೀಕಂಠಯ್ಯನವರು ಕನ್ನಡಕ್ಕೆ ದೊಡ್ಡ ಪರಂಪರೆಯನ್ನು ತಂದು ಕೊಟ್ಟರು. ಭಾಷೆ ಮತ್ತು ಸಾಹಿತ್ಯ ಇಂದು ಮತ್ತೆ ಆತಂಕದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕುವೆಂಪು, ಬೇಂದ್ರೆ, ಮಾಸ್ತಿಯಂತಹವರು ಬರುತ್ತಿದ್ದರೆಂದರೆ ಜನರು ಗಲ್ಲಿ, ಗಲ್ಲಿಯಿಂದ ಕಿಕ್ಕಿರಿದು ಅವರನ್ನು ನೋಡಲು ಹೋಗುತ್ತಿದ್ದರು. ಗೋಷ್ಠಿ, ಉಪನ್ಯಾಸ, ಚರ್ಚೆ ಕೇಳಲು ಹೋಗುತ್ತಿದ್ದರು. ಆದರೆ ಇವತ್ತು ಯಾವುದಾದರೂ ಸ್ಟಾರ್ ಬರುತ್ತಾರೆಂದರೆ ಜನ ಕಿಕ್ಕಿರಿದು ಸೇರುತ್ತಾರೆ. ಕನ್ನಡದ  ಹಿರಿಯ ಸಾಹಿತಿ ಬರ್ತಾನೆ ಅಂದರೆ ಬರಬಹುದು ಅಂತ ಸುಮ್ಮನಾಗುತ್ತಾರೆ. ಆದರೆ ಇಂದು ಕನ್ನಡ ಸಾಹಿತ್ಯ, ಭಾಷೆ ಮರೆಯಾಗುವತ್ತ ಸಾಗುತ್ತಿರುವುದು ನೋವಿನ ಸಂಗತಿ. ಪರಂಪರೆ ಎಂದಾಕ್ಷಣ  ಕೆಲವರು ಎಲ್ಲವೂ ಶ್ರೇಷ್ಠವಾಗಿದೆ ಎಂದು ಅದಕ್ಕೆ ಜೋತು ಬೀಳುವುದು, ಆಧುನಿಕತೆಯನ್ನು ಅಲ್ಲಗಳೆಯುವುದನ್ನು ಮಾಡುತ್ತಾರೆ. ಇನ್ಕೆಲವರು ಆಧುನಿಕವಾದದ್ದು ಎಂದರೆ ಎಲ್ಲವೂ ಸರಿಯಾಗಿದೆ ಅದು ಶ್ರೇಷ್ಠ. ಪರಂಪರೆ ಜೊಳ್ಳು ಎಂದು ಅದನ್ನು ಹೀಗಳೆಯುವರು. ಆದರೆ ಈ ಸ್ವಭಾವವನ್ನು ಬಿಡಬೇಕು. ಪರಂಪರೆಯಲ್ಲಿನ ಉತ್ತಮ ಅಂಶಗಳನ್ನು ಮತ್ತು ಆಧುನಿಕತೆಯಲ್ಲಿನ ಅನುಕೂಲತೆಗಳನ್ನು ಸಮನ್ವಯಗೊಳಿಸಿಕೊಂಡು ಹೊಸದೊಂದು ಮಾರ್ಗದಲ್ಲಿ ನಡೆದರೆ ಅದು ಒಳ್ಳೆಯ ಪ್ರಗತಿ, ಬೆಳವಣಿಗೆ ಆಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಎಂ.ಡಿ.ಇ.ಎಸ್ ಕಾರ್ಯದರ್ಶಿ ವಂ.ಗುರುವಿಜಯ್ ಕುಮಾರ್ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ.ಸಿ.ಎಂ.ಮಣಿ, ಸಂತಜೋಸೆಫರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವಿ.ನಿವೇದಿತಾ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎನ್.ಎಸ್.ತಾರಾನಾಥ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: