ದೇಶಪ್ರಮುಖ ಸುದ್ದಿ

ಕಬ್ಬಿಣದ ಅದಿರು: ಕೇಂದ್ರದಿಂದ ಆಮದು ಸುಂಕ ಏರಿಕೆ ಸಾಧ್ಯತೆ

ನವದೆಹಲಿ (ಜ.16): ಸ್ಥಳೀಯ ಕಬ್ಬಿಣದ ಅದಿರಿಗೆ ಹೆಚ್ಚು ಬೆಲೆ ಹಾಗೂ ಬೇಡಿಕೆ ಬರುವಂತಾಗಲು ವಿದೇಶದಿಂದ ಆಮದಾಗುವ ಅದಿರಿಗೆ ಹಾಕಲಾಗುವ ಸುಂಕ ಹೆಚ್ಚಿಸುವ ಸಂಬಂಧ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಉಕ್ಕು ಉತ್ಪಾದನೆಯಲ್ಲಿ ಬಳಸಲಾಗುವ ಅದಿರು ಆಮದು ಸುಂಕ ಹೆಚ್ಚಿಸುವ ಒತ್ತಾಯ ನಮ್ಮ ಪರಿಶೀಲನೆಯಲ್ಲಿದೆ. ವಿವಿಧ ಸಚಿವಾಲಯಗಳು ಇದನ್ನು ಪರಿಶೀಲಿಸುತ್ತಿವೆ ಎಂದು ಕೇಂದ್ರ ಸರ್ಕಾರದ ಮೂಲಗಳು ಮಂಗಳವಾರ ಹೇಳಿವೆ. ಈ ಸಂಬಂಧ ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮಾಡಿದ ಆಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈಡೇರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇತ್ತೀಚೆಗೆ ಕುಮಾರಸ್ವಾಮಿ ಅವರು ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ವಿದೇಶದಿಂದ ಆಮದಾಗುವ ಅದಿರನ್ನು ಉಕ್ಕು ಕಂಪನಿಗಳು ತರಿಸಿಕೊಳ್ಳುತ್ತಿರುವ ಕಾರಣ ದೇಶೀ ಅದಿರಿಗೆ ಬೆಲೆ ಇಲ್ಲವಾಗಿದೆ. ಹೀಗಾಗಿ ವಿದೇಶಿ ಅದಿರಿಗೆ ಸುಂಕ ಹೆಚ್ಚಿಸಿದರೆ ದೇಶೀ ಅದಿರಿಗೆ ಬೆಲೆ ಬರುತ್ತದೆ ಎಂದಿದ್ದರು. ಈಗ ವಿದೇಶೀ ಅದಿರಿಗೆ ಶೇ.2.5 ಸುಂಕವಿದೆ. (ಎನ್.ಬಿ)

Leave a Reply

comments

Related Articles

error: