ಪ್ರಮುಖ ಸುದ್ದಿ

ವಿಜೃಂಭಣೆಯಿಂದ ಜರುಗಿದ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರಸ್ವಾಮಿ ದೇವಾಲಯದ 60ನೇ ಮಹಾ ರಥೋತ್ಸವ

ರಾಜ್ಯ(ಮಡಿಕೇರಿ)ಜ.17:- ಧಾರ್ಮಿಕ ಹಿನ್ನೆಲೆಯುಳ್ಳ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರಸ್ವಾಮಿ ದೇವಾಲಯದ 60ನೇ ಮಹಾ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ಬೆಳಿಗ್ಗೆ 11 ಗಂಟೆಗೆ ದೇವಾಲಯ ಆವರಣದಿಂದ ಕುಮಾರಲಿಂಗೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತ ಮಹಾರಥದಲ್ಲಿ ಕುಳ್ಳಿರಿಸಿ, ದೇವಾಲಯದ ಧರ್ಮದರ್ಶಿ ಮಂಡಳಿಯವರು ಹಾಗೂ ನೂರಾರು ಮಂದಿ ವ್ರತಧಾರಿಗಳು ರಥವನ್ನೆಳೆದರು.

ಉತ್ಸವದಲ್ಲಿ ಕೂತಿನಾಡು, ತೋಳುನಾಡು, ಪುಷ್ಪಗಿರಿ, ಯಡೂರು, ತಲ್ತರೆ ಶೆಟ್ಟಳ್ಳಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯಗಳ ಗ್ರಾಮಸ್ಥರು ಕುಮಾರಲಿಂಗೇಶ್ವರ ದೇವಾಲಯದಲ್ಲಿ ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಜಾತ್ರೋತ್ಸವ ಅಂಗವಾಗಿ ಕಳೆದ ಒಂದು ವಾರದಿಂದ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಮಕರ ಸಂಕ್ರಮಣ ಕರುವಿನ ಹಬ್ಬದಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಅನಾದಿ ಕಾಲದಿಂದ ನಡೆದು ಬಂದ ಪದ್ದತಿಯಂತೆ ಭಕ್ತಾದಿಗಳು ಪರಿಶುದ್ಧತೆಯಿಂದ ವಿಶಿಷ್ಟ ರೀತಿಯಲ್ಲಿ ಸಾಮೂಹಿಕವಾಗಿ ಆಗಮಿಸಿ ಕುಮಾರಲಿಂಗೇಶ್ವರ ಸ್ವಾಮೀಗೆ ಫಲ, ತಾಂಬೂಲ ಧವಸ ಧಾನ್ಯ ಕಾಣಿಕೆ ಹರಕೆಗಳನ್ನು ಸಲ್ಲಿಸಿದರು.

ರಥೋತ್ಸವದಲ್ಲಿ  ಧರ್ಮದರ್ಶಿ ಮಂಡಳಿ ಅಧ್ಯಕ್ಷ ಜಿ.ಎಸ್. ರಘುಕುಮಾರ್, ಉಪಾಧ್ಯಕ್ಷ ಕೆ.ಟಿ. ಕೃಷ್ಣಪ್ಪ, ಕೆ.ಸಿ. ಮಹೇಶ್‍ಕುಮಾರ್, ಕಾರ್ಯದರ್ಶಿ ಕೆ.ಕೆ. ಪರಮೇಶ್, ದಿವ್ಯಕುಮಾರ್, ಕೆ.ಟಿ.ಮಧುಕುಮಾರ್, ಕೆ.ಬಿ.ಜೋಯಪ್ಪ, ಬಿ.ಎಲ್.ಆನಂದ, ಕೆ.ಕೆ.ಪ್ರಕಾಶ್, ಕೆ.ಎ.ದಿಲೀಪ್, ಚಂದ್ರಾವತಿ, ಎಸ್.ಎ.ಪ್ರತಾಪ್, ಧರ್ಮದರ್ಶಿಗಳು ಹಾಗು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ.ಪಿ ಅನಿಲ್‍ಕುಮಾರ್, ಕುಮಾರಲಿಂಗೇಶ್ವರ ಯುವಕ ಸಂಘದ ಅಧ್ಯಕ್ಷರಾದ ಕೆ.ಎಸ್.ಮಧು, ಸೇರಿದಂತೆ ಪದಾಧಿಕಾರಿಗಳು, ಗ್ರಾಮದ ಪ್ರಮುಖರು ಹಾಜರಿದ್ದರು.

ಮಹಾರಥೋತ್ಸವದ ನಂತರ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನಡೆಯಿತು. ದಾನಿಗಳಾದ ಹರಪಳ್ಳಿ ರವೀಂದ್ರ, ಸೇರಿದಂತೆ ಇತರ ದಾನಿಗಳು ಅನ್ನದಾನಕ್ಕೆ ಹೆಚ್ಚಿನ ಸಹಕಾರ ನೀಡಿದ್ದರು.

ಸರಕಾರದ ವಿವಿಧ ಇಲಾಖೆಗಳ ವತಿಯಿಂದ ರೈತರಿಗೆ ಕೃಷಿ ಮಾಹಿತಿ, ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಜಾನಪದ, ಕಲೆ, ಸಾಹಿತ್ಯ, ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಿಕೊಂಡು ಬಂದಿರುವ ಕುಮಾರಲಿಂಗೇಶ್ವರ ಜಾತ್ರೋತ್ಸವವವು ಜನ ಮಾನಸದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ಗ್ರಾಮಸ್ಥರು, ವಿವಿಧೆಡೆಗಳಲ್ಲಿ ನೆಲೆಸಿರುವ ಕುಟುಂಬಸ್ಥರು ಜಾತ್ರೆ ಸಂದರ್ಭ ಒಟ್ಟಾಗಿ ಪಾಲ್ಗೊಳ್ಳುವುದು ಈ ಜಾತ್ರೋತ್ಸವದ ವಿಶೇಷತೆಯಾಗಿದೆ.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: