ಮೈಸೂರು

ಭವ್ಯ ಭಾರತವನ್ನು ಕಟ್ಟುವ ಕನಸು ಕಂಡವರು ಸ್ವಾಮಿ ವಿವೇಕಾನಂದರು : ವಿ.ನಾಗರಾಜ್ ಬಣ್ಣನೆ

ಮೈಸೂರು,ಜ.17:- ಭವ್ಯ ಭಾರತವನ್ನು ಕಟ್ಟುವ ಕನಸು ಕಂಡವರು ಸ್ವಾಮಿ ವಿವೇಕಾನಂದರು ಎಂದು ದಿ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್ ಬಣ್ಣಿಸಿದರು.

ಅವರಿಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಪೀಠದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ 156ನೇ ಜಯಂತಿ ಮತ್ತು ಸ್ವಾಮಿ ವಿವೇಕಾನಂದ ಮತ್ತು ಭಾರತ ಜಾಗೃತಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸ್ವಾಮಿ ವಿವೇಕಾನಂದರು ಕುಶಾಗ್ರಮತಿಯಾಗಿದ್ದರು. ಅವರು ನಸ್ಯಾಸಿಯಾಗಿದ್ದರೂ ಕೂಡ ಭಾರತವನ್ನು ಹೇಗೆ ಮೇಲಕ್ಕೆತ್ತಬೇಕು, ಭಾರತ ಜಗತ್ತಿನ ಗುರು ಎನಿಸಿಕೊಳ್ಳಲು ಏನು ಮಾಡಬೇಕು ಎಂಬುದರ ಕುರಿತು ಚಿಂತನೆ ನಡೆಸುತ್ತಿದ್ದರು. ಅದಕ್ಕಾಗಿಯೇ ವಿಶ್ವ ಪರ್ಯಟನೆ ಮಾಡಿದರು. ಪಾಕಿಸ್ತಾನದಿಂದ ಕೊಲಂಬೋದವರೆಗೂ ಪರ್ಯಟನೆ ಮಾಡಿ ರಾಜರುಗಳನ್ನು, ಸಾಮಾನ್ಯರನ್ನು,  ವಿದ್ವಾಂಸರನ್ನು ಭೇಟಿ ಮಾಡಿದರು. ಭಾರತವನ್ನು ಆಧುನಿಕ ಭಾರತವನ್ನಾಗಿ ಬದಲಾಯಿಸಬೇಕು ಎಂಬ ಪಣ ತೊಟ್ಟರು. ಆಧ್ಯಾತ್ಮಿಕವಾಗಿ ಜಾಗೃತವಾಗಿರಬೇಕು, ಸಾಮಾಜಿಕವಾಗಿ ಭದ್ರವಾಗಿರಬೇಕು, ಜ್ಞಾನ-ವಿಜ್ಞಾನಗಳ ಆಗರವಾಗಿ ರೂಪುಗೊಳ್ಳಬೇಕು, ಆರ್ಥಿಕವಾಗಿ ಬಲಿಷ್ಠವಾಗಿರಬೇಕು ಎಂಬ ಮಹಾತ್ವಾಕಾಂಕ್ಷೆಯನ್ನು ಹೊಂದಿದ್ದರು. ಎಲ್ಲರೂ ಕೂಡ ನನ್ನಂತೆಯೇ ಎನ್ನುವ ಭಾವನೆ ಬೆಳೆದಾಗ ಸಮಾಜಕ್ಕೋಸ್ಕರ ಕೆಲಸ ಮಾಡಬೇಕೆನ್ನುವ ಜಾಗೃತಿ ತನ್ನಿಂದ ತಾನಾಗಿಯೇ ಬೆಳೆಯುತ್ತದೆ ಎಂಬುದನ್ನು ನಿರೂಪಿಸಿದರು. ಜಾತಿ ಹೆಸರಿನಲ್ಲಿ, ಮೇಲು-ಕೀಳು, ಅಸ್ಪೃಶ್ಯತೆ, ಭಾಷೆ, ಪ್ರಾಂತ್ಯದ ವಿಷಯದಲ್ಲಿ ಛಿದ್ರವಾಗಿರುವ ದೇಶವನ್ನು ಒಗ್ಗೂಡಿಸಬೇಕೆನ್ನುವ ಮಹದಾಸೆ ಹೊಂದಿದ್ದರು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ, ಅಧ್ಯಯನ ಕೇಂದ್ರದ ಡೀನ್ ಪ್ರೊ.ಬಸವರಾಜು, ಪರೀಕ್ಷಾಂಗ ಕುಲಸಚಿವ ಡಾ.ಎಂ.ಎಸ್.ರಮಾನಂದ, ಸಂಯೋಜಕರಾದ ಡಾ.ಜ್ಯೋತಿ ಶಂಕರ್, ಕುಲಸಚಿವ ಪ್ರೊ.ಜಿ.ರಮೇಶ್ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: