
ಪ್ರಮುಖ ಸುದ್ದಿ
ಬಿಗ್ ಮಿಶ್ರಾ ಪೇಡಾ ಮಾಲೀಕ ಸಂಜಯ ಮಿಶ್ರಾ ಮನೆ ಮೇಲೆ ಐಟಿ ದಾಳಿ
ರಾಜ್ಯ(ಹುಬ್ಬಳ್ಳಿ)ಜ.17:- ಹುಬ್ಬಳ್ಳಿಯಲ್ಲಿ ಬಿಗ್ ಐಟಿ ರೇಡ್ ನಡೆದಿದ್ದು, ವಾಣಿಜ್ಯ ನಗರಿಯ ದೊಡ್ಡ ಉದ್ಯಮಿಗಳು ಇದರಿಂದಾಗಿ ಬೆಚ್ಚಿಬಿದ್ದಿದ್ದಾರೆ.
‘ಬಿಗ್ ಮಿಶ್ರಾ’ ಸ್ವೀಟ್ ಮಾರ್ಟ್ ಮಾಲೀಕ ಸಂಜಯ್ ಮಿಶ್ರಾ ಅವರ ಮನೆಯ ಮೇಲೆ ಐಟಿ ದಾಳಿಯಾಗಿದ್ದು, ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
‘ಬಿಗ್ ಮಿಶ್ರಾ’ ಸ್ವೀಟ್ ಮಳಿಗೆಗಳನ್ನು ಹೊಂದಿರುವ ಸಂಜಯ್ ಮಿಶ್ರಾ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣ ಕಲಬುರ್ಗಿ ಮನೆಯ ಮೇಲೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. 40 ಐಟಿ ಅಧಿಕಾರಿಗಳ ನೇತೃತ್ವದಲ್ಲಿ 6 ಕಡೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದ್ದು, ಗೋವಾ ಸೇರಿ ಹೊರರಾಜ್ಯದ ಅಧಿಕಾರಿಗಳನ್ನು ದಾಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. ತಡರಾತ್ರಿ ಹುಬ್ಬಳ್ಳಿಗೆ ಬಂದಿಳಿದಿದ್ದ ಅಧಿಕಾರಿಗಳು ಬಿಗ್ ಮಿಶ್ರಾದಲ್ಲಿ ಹಣ ಹೂಡಿಕೆ ಮಾಡಿದವರ ಮನೆಗಳಿಗೂ ದಾಲಿ ನಡೆಸಿ ಶಾಕ್ ನೀಡಿದ್ದಾರೆ.
ಕಳೆದ ಹಲವು ವರ್ಷಗಳಲ್ಲಿ ‘ಬಿಗ್ ಮಿಶ್ರಾ’ ಸ್ವೀಟ್ ಮಳಿಗೆ ರಾಜ್ಯಾದ್ಯಂತ ಕೋಟ್ಯಾಂತರ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿ ತನ್ನ ಜನಪ್ರಿಯತೆ ಗಳಿಸಿತ್ತು. ಅದರ ಜೊತೆಗೆ ಅನೇಕರು ಇದರಲ್ಲಿ ಬಂಡವಾಳ ಹೂಡಿಕೆ ಮಾಡಿ ಉತ್ತಮ ಲಾಭ ಪಡೆದುಕೊಳ್ಳುತ್ತಿದ್ದರು.
ಹೀಗಾಗಿ ಆದಾಯ ತೆರಿಗೆ ಇಲಾಖೆಗಳು ಇದರ ಮೇಲೆ ಕಳೆದ ಹಲವು ತಿಂಗಳುಗಳಿಂದ ನಿಗಾವಹಿಸಿದ್ದರು. ಅಲ್ಲದೆ, ಉದ್ಯಮದ ಎಲ್ಲ ಮಗ್ಗಲುಗಳನ್ನು ಅರ್ಥ ಮಾಡಿಕೊಂಡು ವ್ಯವಸ್ಥಿತವಾಗಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ಧಾರವಾಡ ಹೊರವಲಯದಲ್ಲಿರುವ ಕ್ಯಾರಕೊಪ್ಪದಲ್ಲಿರುವ ‘ಬಿಗ್ ಮಿಶ್ರಾ’ ಸ್ವೀಟ್ ಕಾರ್ಖಾನೆ ಹಾಗೂ ಸಂಜಯ ಮಿಶ್ರಾ ಮನೆಯಲ್ಲಿಯೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಳಗ್ಗೆಯಿಂದಲೇ ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದು, ಪರಿಶೀಲನಾ ಕಾರ್ಯ ಮುಂದುವರೆದಿದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)